ದುಬೈ: ಭಾನುವಾರ ನಡೆಯಲಿರುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ನಾಯಕತ್ವವೇ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾನುವಾರ ಪಾಕಿಸ್ತಾನದ ಬ್ಯಾಟಿಂಗ್ ಕೋಚ್ ಹಾಗೂ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟರ್ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ಸಲಹೆಗಾರರಾಗಿರುವ ಹೇಡನ್, ಎರಡು ದೇಶಗಳ ಕದನ ರೋಚಕತೆಯಿಂದ ಕೂಡಿರುತ್ತದೆ ಎಂದಿದ್ದು, ಇಂತಹ ದೊಡ್ಡ ಪಂದ್ಯದಲ್ಲಿ ದೋಷಗಳು ತುಂಬಾ ಕಡಿಮೆ ಇರುತ್ತದೆ. ಆದ್ದರಿಂದ ಈ ಪಂದ್ಯದಲ್ಲಿ ನಾಯಕತ್ವ ಫಲಿತಾಂಶಕ್ಕೆ ಪ್ರಮುಖವಾಗಿರುತ್ತದೆ ಎಂದಿದ್ದಾರೆ.
ಎಂಎಸ್ ಧೋನಿ ಮತ್ತು ಇಯಾನ್ ಮಾರ್ಗನ್ ಅವರನ್ನು ಉದಾಹರಣೆ ಕೊಟ್ಟಿರುವ ಹೇಡನ್, ಐಪಿಎಲ್ನಲ್ಲಿ ಇಬ್ಬರು ವೈಯಕ್ತಿಕ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲದಿದ್ದರೂ, ಅವರಿಬ್ಬರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು ಎಂದು ಹೇಡನ್ ತಿಳಿಸಿದ್ದಾರೆ.
ಅವರಿಬ್ಬರ ವೈಯಕ್ತಿಕ ಪ್ರದರ್ಶನ ಹಿಂದಿನ ಅಂಕಿ-ಅಂಶಗಳಿಗೆ ಹೋಲಿಸಿದರೆ ಉತ್ತಮವಾಗಿರಲಿಲ್ಲ, ಆದರೆ ಯುಎಇ ನಂತಹ ಪರಿಸ್ಥಿತಿಗಳಲ್ಲಿ ಐಪಿಎಲ್ನಲ್ಲಿ ಫೈನಲ್ಗೆ ತಮ್ಮ ತಂಡಗಳನ್ನು ಕೊಂಡೊಯ್ಯುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಹಾಗಾಗಿ ನಾನು ಯುಎಇಯಲ್ಲಿ ಮುಂಬರುವ ಪಂದ್ಯಗಳಲ್ಲಿ ನಾಯಕತ್ವವೇ ಪ್ರಮುಖ ಪಾತ್ರವಹಿಸುತ್ತದೆ ಎಂದು ಮಾಧ್ಯಮ ಸಂವಾದದ ವೇಳೆ ಹೇಳಿದ್ದಾರೆ.
ಬಾಬರ್ ಅಜಮ್ ಬಗ್ಗೆ ಮಾತನಾಡುತ್ತಾ, ಆತನೊಬ್ಬ ಅತ್ಯುತ್ತಮ ಬ್ಯಾಟರ್, ಆದರೆ ಅವರ ಮೇಲೆ ನಾಯಕತ್ವದ ಹೆಚ್ಚಿನ ಜವಾಬ್ದಾರಿ ಇರುವುದು ಹೆಚ್ಚಿನ ಒತ್ತಡವನ್ನು ತರಬಹುದು. ಏಕೆಂದರೆ ಅವರು ಪ್ರತಿಯೊಬ್ಬರ ಟಾರ್ಗೆಟ್ ಆಗಲಿದ್ದು, ಎಲ್ಲರೂ ಅವರನ್ನು ಔಟ್ ಮಾಡುವುದರ ಬಗ್ಗೆ ಆಲೋಚಿಸುತ್ತಿರುತ್ತಾರೆ. ಆದರೆ ನಾಯಕತ್ವದ ಜೊತೆಗೆ ಬ್ಯಾಟಿಂಗ್ ಪಾತ್ರವನ್ನು ಅವರು ಉತ್ತಮವಾಗಿ ನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಭಾರತೀಯ ಕ್ರಿಕೆಟ್ಅನ್ನು ತುಂಬಾ ಹತ್ತಿರದಿಂದ ಗಮನಿಸಿರುವ ಹೇಡನ್, ಭಾರತ ತಂಡದಲ್ಲಿ ರಿಷಭ್ ಪಂತ್ ಮತ್ತು ಕೆ ಎಲ್ ರಾಹುಲ್ ಪಾಕಿಸ್ತಾನಕ್ಕೆ ಬಹುದೊಡ್ಡ ಭೀತಿಯನ್ನುಂಟು ಮಾಡಲಿದ್ದಾರೆ ಎಂದು ಆಸ್ಟ್ರೇಲಿಯನ್ ಬ್ಯಾಟರ್ ಹೇಳಿದ್ದಾರೆ.
ಇದನ್ನು ಓದಿ:ವಿಶ್ವಕಪ್ ಗೆಲ್ಲಲು ಭಾರತ ನೆಚ್ಚಿನ ತಂಡ, ಕನ್ನಡಿಗ ರಾಹುಲ್ ಟಾಪ್ ಸ್ಕೋರರ್ ಎಂದ ಬ್ರೆಟ್ ಲೀ