ಮುಂಬೈ: ಕ್ರಿಕೆಟ್ ಎಂದರೆ ಒಂದು ವರ್ಗಕ್ಕೆ ಸೇರಿದ ಕ್ರೀಡೆ ಎನ್ನುವ ಕಾಲ ಮುಗಿದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಎಂಬ ನಗದು ಸಮೃದ್ಧ ಲೀಗ್ ಕೇವಲ ಹಣಕ್ಕೆ ಮಾತ್ರವಲ್ಲ, ಪ್ರತಿಭೆಗಳ ಅನಾವರಣಕ್ಕೂ ವೇದಿಕೆಯಾಗಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಈಗಾಗಲೇ ಟಿ.ನಟರಾಜನ್, ನವದೀಪ್ ಸೈನಿ, ಚೇತನ್ ಸಕಾರಿಯಾ ಸೇರಿದಂತೆ ಸಮಾಜದ ಮಧ್ಯಮ ವರ್ಗದಲ್ಲಿ ಬೆಳೆದು ಬಂದಂತಹ ಅನೇಕ ಯುವ ಪ್ರತಿಭೆಗಳಿಗೆ ಐಪಿಎಲ್ ದಾರಿದೀಪವಾಗಿದೆ. ಇದೀಗ ಆ ಸಾಲಿಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವ ಕುಲದೀಪ್ ಸೇನ್ ಹೊಸ ಸೇರ್ಪಡೆ.
ಭಾನುವಾರ ನಡೆದ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಓವರ್ನಲ್ಲಿ ಕುಲದೀಪ್ ಸೇನ್ 15 ರನ್ಗಳನ್ನು ಡಿಫೆಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಮಾರ್ಕಸ್ ಸ್ಟೋಯ್ನಿಸ್‌ರತಂಹ ಬಲಾಢ್ಯ ಬ್ಯಾಟರ್ ವಿರುದ್ಧ ಕೇವಲ 15 ರನ್ ಡಿಫೆಂಡ್ ಮಾಡಿ ರಾಯಲ್ಸ್ಗೆ ಗೆಲುವು ತಂದುಕೊಡುತ್ತಿದ್ದಂತೆ ಕುಲದೀಪ್ ಇಂಟರ್ನೆಟ್ ಸೆನ್ಸೇಷನ್ ಆಗಿ ಹೊರಹೊಮ್ಮಿದರು. ಅಷ್ಟೇ ಅಲ್ಲ, ಮಾಲಿಂಗ, ಸಂಗಕ್ಕಾರ, ಬೌಲ್ಟ್‌ರಂತಹ ಘಟಾನುಘಟಿ ಕ್ರಿಕೆಟಿಗರಿಂದ ಮೆಚ್ಚುಗೆ ಗಳಿಸಿದರು.
ಈ ಕುಲದೀಪ್ ಸೇನ್ ಯಾರು? ಅವರ ಹಿನ್ನೆಲೆ ಏನು? ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿದ್ದವು. ರಾತ್ರೋರಾತ್ರಿ ಸುದ್ದಿಯಾಗಿರುವ ಸೇನ್, ಮಧ್ಯಪ್ರದೇಶದ ರಾವಾ ಪಟ್ಟಣದ ಸಿರ್ಮೌರ್ ಚೌರಹದಲ್ಲಿ ಸಲೂನ್ ಅಂಗಡಿ ನಡೆಸುತ್ತಿರುವ ಒಬ್ಬ ಬಡ ಕ್ಷೌರಿಕನ ಮಗ.
25 ವರ್ಷದ ಕುಲದೀಪ್ ನಿನ್ನೆಯಷ್ಟೇ ರಾಜಸ್ಥಾನ್ ರಾಯಲ್ಸ್ ಪರ ಪದಾರ್ಪಣೆ ಮಾಡಿದ್ದರು. ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಕೊನೆಯ ಓವರ್ನಲ್ಲಿ 15 ರನ್ ಡಿಫೆಂಡ್ ಮಾಡಿ ಪದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಅಲ್ಲದೇ 146kmh ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಆದರೆ ತಮ್ಮ ಮಗನಿಗೆ ಪ್ರತಿಷ್ಠಿತ ಐಪಿಎಲ್ ಲೀಗ್ನಲ್ಲಿ ಆಡುವ ಅವಕಾಶ ಸಿಕ್ಕಿದ್ದರೂ ಸಹ ಭಾನುವಾರ ಗ್ರಾಹಕರ ಸಂಖ್ಯೆ ಹೆಚ್ಚಿದ್ದರಿಂದ ಅಂಗಡಿಯಲ್ಲಿ ತಮ್ಮ ಕಾಯಕದಲ್ಲಿ ತೊಡಗಿದ್ದರಂತೆ.
"ನನಗೆ ಇಂದು ಊಟ ಮಾಡಲು ಕೂಡಾ ಸಮಯ ಇರಲಿಲ್ಲ. ಇಂದು(ಭಾನುವಾರ) ಸಾಕಷ್ಟು ಗ್ರಾಹಕರಿದ್ದರು" ಎಂದು ಹೇರ್ ಕಟ್ ಮಾಡುತ್ತಲೇ ಸ್ಥಳೀಯ ಮಾಧ್ಯಮಗಳಿಗೆ ರಾಮ್ ಪಾಲ್ ಸೇನ್ ತಿಳಿಸಿದ್ದಾರೆ.
"ನಾನು ಈ ವೃತ್ತಿಯನ್ನು 30 ವರ್ಷಗಳಿಂದ ಮಾಡುತ್ತಿದ್ದೇನೆ. ನನ್ನ ಮಗನ ಸಾಧನೆ ನನಗೆ ಖುಷಿಯಿದೆ. ಆತ ನನ್ನನ್ನು ಹೆಮ್ಮೆ ಪಡುವಂತೆ ಮಾಡಿದ್ದಾನೆ. ಆದರೆ ನಾನು ಎಂದೂ ಕ್ರಿಕೆಟ್ ಆಡುಬೇಕೆಂಬ ಅವನ ಉತ್ಸಾಹವನ್ನು ಬೆಂಬಲಿಸಲಿಲ್ಲ. ಆತ ಶಾಲಾ ದಿನಗಳಲ್ಲಿ ಕ್ರಿಕೆಟ್ ಆಡುವಾಗ ಬೈದಿದ್ದೇನೆ, ಕೆಲವೊಮ್ಮೆ ಹೊಡೆದಿದ್ದೇನೆ. ಆದರೆ ಅವನು ಮಾತ್ರ ತನ್ನ ಕನಸನ್ನು ಎಂದಿಗೂ ಕೈಬಿಡಲಿಲ್ಲ" ಎಂದು ತಿಂಗಳಿಗೆ 8,000 ಸಂಪಾದಿಸುವ ರಾಮ್ ಪಾಲ್ ಮಗನ ಸಾಧನೆಯನ್ನು ಭಾವುಕತೆಯಿಂದ ನುಡಿದರು.
ರಾಮ್ ತಮ್ಮ ಹಳ್ಳಿಯಿಂದ ಅಂಗಡಿಗೆ 6 ಕಿ.ಮೀ ಸೈಕಲ್ನಲ್ಲಿ ತೆರಳುತ್ತಾರೆ. ರಾತ್ರೋರಾತ್ರಿ ತಮ್ಮ ಮಗ ದೇಶಾದ್ಯಂತ ಪ್ರಸಿದ್ಧಿ ಪಡೆದರೂ ತಮ್ಮ ದಿನನಿತ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಹೇಳುತ್ತಾರೆ.
ಬಡಕುಟುಂಬದಿಂದ ಬಂದಂತಹ ಕುಲದೀಪ್ ಸೇನ್ ಅವರು ಇಂದು ಕ್ರಿಕೆಟಿಗನಾಗಿ ಬೆಳೆದಿರುವ ಸಂಪೂರ್ಣ ಶ್ರೇಯ ಕೋಚ್ ಆಂಟೋನಿ ಅವರಿಗೆ ಸಲ್ಲುತ್ತದೆ. ಅವರು ಕುಲದೀಪ್ ಅವರ ಡಯಟ್, ಸ್ಪೈಕ್ ಶೂಗಳು ಮತ್ತು ತರಬೇತಿಯ ಸಂಪೂರ್ಣ ವೆಚ್ಚ ಭರಿಸಿದ್ದಾರೆ ಎಂದು ರಾಮ್ ಪಾಲ್ ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ:ಮಗನ ಕ್ರಿಕೆಟ್ ಕನಸಿಗೆ ಚಿನ್ನ, ಜಮೀನು ಅಡವಿಟ್ಟ ತಂದೆ-ತಾಯಿ: ರಣಜಿ ತ್ರಿಶತಕ ವೀರನ ರೋಚಕ ಜರ್ನಿ!