ನವದೆಹಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಾಮೆಂಟ್ಗೋಸ್ಕರ ಟೀಂ ಇಂಡಿಯಾ ನಿನ್ನೆ ಪ್ರಕಟಗೊಂಡಿದೆ. ಅಳೆದು ತೂಗಿ 15 ಪ್ಲೇಯರ್ಸ್ಗೆ ಮಣೆ ಹಾಕಲಾಗಿದೆ. ತಂಡದಲ್ಲಿ ಮೂರನೇ ವೇಗಿಯಾಗಿ ಬೌಲಿಂಗ್ ಟ್ರಂಪ್ ಕಾರ್ಡ್ ಹರ್ಷಲ್ ಪಟೇಲ್ಗೆ ಅವಕಾಶ ನೀಡಲಾಗಿದೆ.
ಟೀಂ ಇಂಡಿಯಾ ಪ್ರಕಟಗೊಳ್ಳುತ್ತಿದ್ದಂತೆ ಅನೇಕರು ತರಹೇವಾರಿ ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಆಯ್ಕೆ ಸಮಿತಿ ಮಾಜಿ ಸದಸ್ಯರಾಗಿರುವ ಕೃಷ್ಣಮಾಚಾರಿ ಶ್ರೀಕಾಂತ್ ಸಹ ತಮ್ಮ ಅಭಿಪ್ರಾಯ ಹೊರಹಾಕಿದ್ದು, ತಂಡದಲ್ಲಿ ಮೊಹಮ್ಮದ್ ಶಮಿಗೆ ಅವಕಾಶ ನೀಡಬಹುದಾಗಿತ್ತು ಎಂದು ತಿಳಿಸಿದ್ದಾರೆ. ಒಂದು ವೇಳೆ ನಾನು ಆಯ್ಕೆ ಸಮಿತಿ ಅಧ್ಯಕ್ಷನಾಗಿದ್ದರೆ, ಖಂಡಿತವಾಗಿ ಮೊಹಮ್ಮದ್ ಶಮಿ ಅವರಿಗೆ ತಂಡದಲ್ಲಿ ಸ್ಥಾನ ನೀಡುತ್ತಿದ್ದೆ. ನಾವು ಆಸ್ಟ್ರೇಲಿಯಾದಲ್ಲಿ ಆಡಲಿದ್ದೇವೆ. ಆ ಬೌಲರ್ ಬಳಿ ನಿಜವಾದ ಆ್ಯಕ್ಷನ್, ಬೌನ್ಸ್ ಇದೆ. ಬಹುಶಃ ಹರ್ಷಲ್ ಪಟೇಲ್ ಬದಲಿಗೆ ಶಮಿಗೆ ಚಾನ್ಸ್ ನೀಡಬಹುದಿತ್ತು ಎಂದಿದ್ದಾರೆ.
ಇದನ್ನೂ ಓದಿ: 'ಕನಸು ನನಸಾಗಿದೆ'.. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ದಿನೇಶ್ ಪ್ರತಿಕ್ರಿಯೆ
ಹರ್ಷಲ್ ಓರ್ವ ಉತ್ತಮ ಬೌಲರ್. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಮೊಹಮ್ಮದ್ ಶಮಿ ಉತ್ತಮ ಆಯ್ಕೆ. ಕಳೆದ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶಮಿ ನನ್ನ ಮೊದಲ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೊಹಮ್ಮದ್ ಶಮಿ ಓರ್ವ ಮುಂಚೂಣಿ ಬೌಲರ್. ಕಳೆದ ವರ್ಷದಿಂದ ಅವರ ದಾಖಲೆಯನ್ನೊಮ್ಮೆ ಪರಿಶೀಲಿಸಿ. ಆರಂಭದಲ್ಲೇ ವಿಕೆಟ್ ಪಡೆದುಕೊಂಡು ತಂಡಕ್ಕೆ ಮೇಲುಗೈ ತಂದುಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈ ಸಲದ ವಿಶ್ವಕಪ್ನಲ್ಲಿ ಬುಮ್ರಾ, ಭುವನೇಶ್ವರ್ ಕುಮಾರ್ ಜೊತೆ ಹರ್ಷಲ್ ಪಟೇಲ್ ಹಾಗೂ ಅರ್ಷದೀಪ್ ಸಿಂಗ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಸ್ಯಾಮ್ಸನ್ಗೆ ಅವಕಾಶ ನೀಡಬೇಕಾಗಿತ್ತು ಎಂದ ಕನೇರಿಯಾ: ಈ ಸಲದ ವಿಶ್ವಕಪ್ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಕಾರಣ ಟೀಂ ಇಂಡಿಯಾ ಸಂಜು ಸ್ಯಾಮನ್ಸ್ಗೆ ಅವಕಾಶ ನೀಡಬೇಕಾಗಿತ್ತು ಎಂದು ಪಾಕಿಸ್ತಾನದ ಮಾಜಿ ಆಟಗಾರ ದಾನೀಶ್ ಕನೇರಿಯಾ ಅಭಿಪ್ರಾಯ ಪಟ್ಟಿದ್ದಾರೆ. ತಂಡದಲ್ಲಿ ರಿಷಭ್ ಪಂತ್ ಜಾಗದಲ್ಲಿ ಸ್ಯಾಮ್ಸನ್ಗೆ ಅವಕಾಶ ನೀಡಬೇಕಾಗಿತ್ತು ಎಂದಿರುವ ಅವರು, ವಿದೇಶಿ ನೆಲದಲ್ಲಿ ಆತ ಉತ್ತಮವಾಗಿ ಆಡಿದ್ದಾರೆ ಎಂದಿದ್ದಾರೆ.