ನವದೆಹಲಿ: ವಿರಾಟ್ ಕೊಹ್ಲಿ ಇನ್ನು ಮುಂದೆ ತಂಡದ ನಾಯಕನಾಗದಿದ್ದರೂ ರನ್ ಗಳಿಸುವುದನ್ನು ಮುಂದುವರಿಸುತ್ತಾರೆ ಎಂದು ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ವಿಶ್ವಾಸ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟೀಂ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವೆ ಕೇಳಿ ಬರುತ್ತಿರುವ ಭಿನ್ನಾಭಿಪ್ರಾಯವನ್ನು ತಳ್ಳಿಹಾಕಿದರು.

ಅವರು ಏಕೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ? ಅವರು ಭಾರತಕ್ಕಾಗಿ ಆಡುತ್ತಿದ್ದಾರೆ. ವಿರಾಟ್ ಮತ್ತು ರೋಹಿತ್ ನಡುವೆ ಹರಿದಾಡುತ್ತಿರುವ ವದಂತಿ ಸುಳ್ಳು. ಇದು ಕೇವಲ ಊಹಾಪೋಹ ಅಷ್ಟೇ. ಈ ತರಹದ ಸುದ್ದಿ ಕಳೆದ ವರ್ಷದಿಂದ ನಡೆಯುತ್ತಿದೆ. ಆದರೆ, ಈ ವ್ಯಕ್ತಿಗಳು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸತ್ಯ ಏನೆಂದು ಎಲ್ಲರಿಗೂ ಗೊತ್ತಿದೆ ಎಂದು ಅದಕ್ಕೆ ತೆರೆ ಎಳೆದರು.
ರೋಹಿತ್ ನಾಯಕತ್ವದಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಯೋಚಿಸದೇ ಇರಲು ಸಾಧ್ಯವೇ ಇಲ್ಲ ಎಂದ ಗವಾಸ್ಕರ್, ತಂಡದ ನಾಯಕ ಹೇಳಿದಂತೆ ಕೇಳುವುದು ಪ್ರತಿಯೊಬ್ಬ ಆಟಗಾರನ ಕರ್ತವ್ಯ. ಓರ್ವ ಯಶಸ್ವಿ ನಾಯಕ ಸಾಮಾನ್ಯ ಆಟಗಾರನಾದ ಬಳಿಕ ಉತ್ತಮ ಪ್ರದರ್ಶನ ತೋರುವುದಿಲ್ಲ ಅನ್ನೋದು ಸತ್ಯಕ್ಕೆ ದೂರವಾದ ಮಾತು.

ಉತ್ತಮ ಬ್ಯಾಟ್ಸಮನ್ ರನ್ ಗಳಿಸದಿದ್ದರೆ, ಉತ್ತಮ ಬೌಲರ್ ವಿಕೆಟ್ ಕೀಳದಿದ್ದರೆ ಅದು ತಂಡಕ್ಕೆ ಆಘಾತ. ಇದರಿಂದ ನಾಯಕ (ರೋಹಿತ್ ಶರ್ಮಾ) ಯಾವುದೇ ನಿರ್ಧಾರಕ್ಕೂ ಬರಬಹುದು ಎಂದು ಪರೋಕ್ಷವಾಗಿ ಕಳಪೆ ಪ್ರದರ್ಶನ ತೋರುವ ಆಟಗಾರರನ್ನು ಹೊರಗಿಡುವ ದಾಟಿಯಲ್ಲಿ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿ ಆಗಲಿ, ರೋಹಿತ್ ಶರ್ಮಾ ಆಗಲಿ ಅಥವಾ ಬೇರೆ ಯಾವುದೇ ಆಟಗಾರ ಆಗಲಿ, ಯಾರ ನಾಯಕತ್ವದಲ್ಲಿ ಆಡಿದರೂ ಅದು ಭಾರತಕ್ಕಾಗಿ. ಇದನ್ನು ಬಿಟ್ಟು ಬೇರೇನೂ ಹೇಳಲಾರೆ. ಆದರೆ, ಕೊಹ್ಲಿ ಇದರಿಂದ ಹೊರ ಬರಲಿದ್ದು ಭಾರತಕ್ಕಾಗಿ ರನ್ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟೀಂ ಇಂಡಿಯಾದ ಹೊಸ ನಾಯಕನ ಮುಂದಾಳತ್ವದಲ್ಲಿ ಅಹಮದಾಬಾದ್‌ನಲ್ಲಿ ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ODI ನಲ್ಲಿ ಭಾರತದ ಸಂಪೂರ್ಣ ಮೇಲುಗೈ ಸಾಧಿಸಿತು. ಬಹುದಿನಗಳ ಬಳಿಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಸಾಮಾನ್ಯ ಆಟಗಾರರಾಗಿ ಕಣಕ್ಕಿಳಿದ್ದಿದ್ದರು.
ಇದನ್ನೂ ಓದಿ: IND vs WI: ಟೀಂ ಇಂಡಿಯಾ ಸೇರಿದ ರಾಹುಲ್ ,ಮಯಾಂಕ್, ಸೈನಿ: ನೆಟ್ನಲ್ಲಿ ಅಭ್ಯಾಸ
ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದ್ದು (ನಾಳೆ) ಬುಧವಾರದಂದು ಅಹಮದಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಹಾಗಾಗಿ ಸಹಜವಾಗಿ ಕ್ರೀಡಾಭಿಮಾನಿಗಳ ಕಣ್ಣು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಮೇಲೆ ಬಿದ್ದಿದೆ.