ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ವಿರಾಟ್ ಕೊಹ್ಲಿ ಕಳೆದ ಶನಿವಾರ ರಾಜೀನಾಮೆ ಘೋಷಣೆ ಅವರ ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಆದರೆ, ವಿರಾಟ್ ನಾಯಕತ್ವದಿಂದ ತೆಗೆದುಹಾಕಲು ಬಯಸಲಾಗಿತ್ತು ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಅತಿ ಕಡಿಮೆ ಅವಧಿಯ ಅಂತರದಲ್ಲೇ ವಿರಾಟ್ ಟೀಂ ಇಂಡಿಯಾದ ಎಲ್ಲ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಟೆಸ್ಟ್ ತಂಡವನ್ನು 7 ವರ್ಷಗಳ ಕಾಲ ಮುನ್ನಡೆಸಿದ ಬಳಿಕ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದಿದ್ದಾರೆ.
ಕಳೆದ ವರ್ಷ ಟಿ-20 ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ನಂತರದ ಬೆಳವಣಿಗೆಯಲ್ಲಿ ವೈಟ್ ಬಾಲ್ ಎರಡೂ ಮಾದರಿಗಳಿಗೆ ಒಬ್ಬನೇ ನಾಯಕ ಇರಬೇಕೆಂದು ಟೀಂ ಇಂಡಿಯಾದ ಆಯ್ಕೆ ಸಮಿತಿ ಕೊಹ್ಲಿ ಅವರನ್ನು ಏಕದಿನ ನಾಯಕತ್ವ ತೊರೆಯುವಂತೆ ಸೂಚಿಸಿತ್ತು.
ಅತಿ ಕಡಿಮೆ ಅವಧಿಯ ಅಂತರದಲ್ಲೇ ವಿರಾಟ್ ಟಿ-20, ಏಕದಿನ, ಟೆಸ್ಟ್ ಹಾಗೂ ಐಪಿಎಲ್ ನಾಯಕತ್ವ ತೊರೆದಿದ್ದಾರೆ. ಇದನ್ನು ಯಾರೂ ಕೂಡ ಊಹಿಸಿರಲಿಲ್ಲ. ಅತಿ ವೇಗವಾಗಿ ಮುಖ್ಯವಾದ ಜವಾಬ್ದಾರಿಯಿಂದ ಹೊರ ಬಂದಿದ್ದಾರೆ. ಅವರ ನಾಯಕತ್ವಕ್ಕೆ ಬೆದರಿಕೆ ಇದೆ ಎಂಬ ಭಾವನೆ ಬಂದಾಗ ಹುದ್ದೆಗಳನ್ನು ತ್ಯಜಿಸಲು ಒಲವು ತೋರುತ್ತಾರೆ ಎಂದು ಮಂಜ್ರೇಕರ್ ಅಭಿಪ್ರಾಯ ಪಟ್ಟಿದ್ದಾರೆ.
'ಲಂಕಾ' ದಹಿಸಿ ಟೆಸ್ಟ್ ಗೆಲುವಿನ ಅಭಿಯಾನ
ವಿರಾಟ್ ಕೊಹ್ಲಿ ಟೆಸ್ಟ್ ತಂಡದ ಅತಿ ಯಶಸ್ಸಿ ನಾಯಕರಾಗಿದ್ದಾರೆ. ಎಂ.ಎಸ್.ದೋನಿ ಅವರಿಂದ ನಾಯಕತ್ವ ಪಡೆದ ಬಳಿಕ ಟೀಂ ಇಂಡಿಯಾವನ್ನು 68 ಪಂದ್ಯಗಳಲ್ಲಿ ಮುನ್ನಡೆಸಿ 40ರಲ್ಲಿ ಜಯ ತಂದು ಕೊಟ್ಟಿದ್ದಾರೆ. ಇವರ ಗೆಲುವಿನ ಸರಾಸರಿ 58.82ರಷ್ಟಿದೆ. ನಾಯಕನ ಜವಾಬ್ದಾರಿ ವಹಿಸಿಕೊಂಡ ಬಳಿಕ 2015ರಲ್ಲಿ ಶ್ರೀಲಂಕಾದಲ್ಲಿ ಮೊದಲ ಟೆಸ್ಟ್ ಸರಣಿಯನ್ನು ತಮ್ಮದಾಗಿಸಿಕೊಂಡಿದ್ದರು. 22 ವರ್ಷಗಳ ಬಳಿಕ ಲಂಕಾವನ್ನು ತನ್ನ ನೆಲದಲ್ಲೇ ಕೊಹ್ಲಿ ಪಡೆ ಬಗ್ಗು ಬಡೆದಿತ್ತು.
ಇದನ್ನೂ ಓದಿ: ಭಾರತ ಟೆಸ್ಟ್ ತಂಡದ ನಂಬರ್ 1 ನಾಯಕ ಕೊಹ್ಲಿಯ ದಾಖಲೆಗಳ ವಿವರ..