ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದಾಗಿನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿಯುತ್ತಿರುವ ವಿರಾಟ್ ಕೊಹ್ಲಿ ಅನೇಕ ಮಹತ್ವದ ವಿಚಾರ ಹಂಚಿಕೊಂಡಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಅನೇಕ ಫ್ರಾಂಚೈಸಿಗಳು ತಮ್ಮ ಬಳಿ ಮನವಿ ಮಾಡಿರುವುದಾಗಿ ವಿರಾಟ್ ಹೇಳಿಕೊಂಡಿದ್ದಾರೆ.
ಆರ್ಸಿಬಿ ಪಾಡ್ಕಾಸ್ಟ್ನಲ್ಲಿ ಭಾಗಿಯಾಗಿ ಮಾತನಾಡಿರುವ ವಿರಾಟ್ ಕೊಹ್ಲಿ ಬೆಂಗಳೂರು ತಂಡದೊಂದಿಗೆ ತಾವು ಹೊಂದಿರುವ ಅವಿನಾಭಾವ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಕಳೆದ ಎಂಟು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿದ್ದ ವಿರಾಟ್, ಕಳೆದ ಋತುವಿನ ಕೊನೆಯಲ್ಲಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇದರ ಹೊರತಾಗಿ ಕೂಡ ಮುಂದಿನ ಆವೃತ್ತಿಗೋಸ್ಕರ ಆರ್ಸಿಬಿ ಅವರನ್ನ ರಿಟೈನ್ ಮಾಡಿಕೊಂಡಿದೆ.
ಇದನ್ನೂ ಓದಿರಿ: IPL 2022 ಮೆಗಾ ಹರಾಜು: ಜೇಸನ್ ಹೋಲ್ಡರ್, ರಾಯುಡು, ಪರಾಗ್ ಮೇಲೆ RCB ಕಣ್ಣು!
2016ರಲ್ಲಿ ತಂಡ ಫೈನಲ್ನಲ್ಲಿ ಸೋಲು ಕಂಡಿರುವುದಕ್ಕೆ ಈಗಲೂ ತಮಗೆ ವಿಷಾದವಿದೆ ಎಂದಿರುವ ವಿರಾಟ್, ಈ ಹಿಂದೆ ಕೆಲ ಐಪಿಎಲ್ ಫ್ರಾಂಚೈಸಿಗಳು ತಮ್ಮನ್ನು ಹರಾಜಿನಲ್ಲಿ ಭಾಗಿಯಾಗಲು ಸಂಪರ್ಕಿಸಿದ್ದವು. ಆದರೆ, ಆರ್ಸಿಬಿಯಲ್ಲೇ ಉಳಿಯುವುದಾಗಿ ಹೇಳಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ನಾನು ನನ್ನ ಜೀವನವನ್ನು ಹೇಗೆ ಅನುಸರಿಸುತ್ತೇನೆಯೋ ಅದೇ ರೀತಿ ಆರ್ಸಿಬಿ ಜೊತೆ ಇದ್ದೇನೆ. ಆರಂಭದ ಮೂರು ವರ್ಷಗಳ ಕಾಲ ಫ್ರಾಂಚೈಸಿ ನನಗೆ ಕೊಟ್ಟಿರುವ ಅವಕಾಶ, ನಂಬಿಕೆ ನಿಜಕ್ಕೂ ವಿಶೇಷವಾದದು ಎಂದಿದ್ದಾರೆ.
2008ರಲ್ಲಿ ಐಪಿಎಲ್ ಉದ್ಘಾಟನೆಯಾದಾಗಿನಿಂದಲೂ ಒಂದೇ ಫ್ರಾಂಚೈಸಿ ಪರ ಆಡಿರುವ ಏಕೈಕ ಕ್ರಿಕೆಟಿಗ ಎಂಬ ದಾಖಲೆಗೂ ವಿರಾಟ್ ಪಾತ್ರರಾಗಿದ್ದಾರೆ. ಇದೀಗ 15ನೇ ಆವೃತ್ತಿಯಲ್ಲೂ ವಿರಾಟ್ ಆರ್ಸಿಬಿ ಪರ ಬ್ಯಾಟ್ ಬೀಸಲಿದ್ದಾರೆ.