ಮುಂಬೈ: ಟೀಂ ಇಂಡಿಯಾ ಓಪನರ್ ಬ್ಯಾಟರ್‌ಗಳಾದ ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮಾ ಸಾಕಷ್ಟು ರನ್ ಗಳಿಸಿದ್ದರಿಂದಲೇ 2021ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊನೆಯ ಮತ್ತು ಐದನೇ ಪಂದ್ಯಕ್ಕೂ ಮುನ್ನ ಭಾರತವು 2-1 ರ ಮುನ್ನಡೆ ಸಾಧಿಸಲು ಸಾಧ್ಯವಾಗಿತ್ತು.
ಈ ಸರಣಿಯಲ್ಲಿ ಶರ್ಮಾ 4 ಪಂದ್ಯಗಳಿಂದ 368 ರನ್ ಗಳಿಸಿದ್ದರು. ಲಾರ್ಡ್ಸ್ ಮತ್ತು ಹಡಿಂಗ್ಲೆಗಳಲ್ಲಿ ಒಂದಿಷ್ಟು ಹಾಫ್ ಸೆಂಚುರಿಗಳನ್ನು ಬಾರಿಸಿದ್ದ ಶರ್ಮಾ, ಓವಲ್ನಲ್ಲಿ ನಾಲ್ಕನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್ನಲ್ಲಿ ಗಳಿಸಿದ್ದ 127 ರನ್ ಗಳಿಸಿದ ಆಟ ಅದ್ಭುತವಾಗಿತ್ತು. ಇನ್ನೊಂದೆಡೆ, ರಾಹುಲ್ 315 ರನ್ ಗಳಿಸಿದ್ದರು. ರಾಹುಲ್ ಲಾರ್ಡ್ಸ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಗಳಿಸಿದ 129 ರನ್ಗಳು ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದವು.
ಆದರೆ, ಈ ಬಾರಿ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿ ಇಂಗ್ಲೆಂಡ್ಗೆ ತೆರಳುತ್ತಿದ್ದರೆ, ಎಜ್ಬಾಸ್ಟನ್ ಟೆಸ್ಟ್ಗೆ ಗಾಯಗೊಂಡಿರುವ ರಾಹುಲ್ ಲಭ್ಯವಿಲ್ಲ. ಹೀಗಾಗಿ ಜುಲೈ 1 ರಿಂದ 5ರ ಪಂದ್ಯದಲ್ಲಿ ಪ್ರತಿಭಾನ್ವಿತ ಆಟಗಾರ ಶುಬ್ಮನ್ ಗಿಲ್ ಓಪನರ್ ಆಗಿ ಕ್ರೀಸಿಗಿಳಿಯಬಹುದು.
2007ರ ನಂತರ ಭಾರತವು ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಆದರೆ ಎಜ್ಬಾಸ್ಟನ್ ಟೆಸ್ಟ್ಗೆ ರಾಹುಲ್ ಲಭ್ಯವಿಲ್ಲದಿರುವುದು ಭಾರತೀಯ ಬ್ಯಾಟಿಂಗ್ ಲೈನ್‌ಅಪ್‌ಗೆ ಸವಾಲಾಗಲಿದೆ ಎಂದು ಮಾಂಜ್ರೇಕರ್ ಕಳವಳ ವ್ಯಕ್ತಪಡಿಸಿದ್ದಾರೆ.
"ಈ ಬಾರಿ ಕೆ.ಎಲ್.ರಾಹುಲ್ ಆಡಲು ಲಭ್ಯವಿಲ್ಲದಿರುವುದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಆದರೆ ಶ್ರೇಯಸ್ ಅಯ್ಯರ್ ಇರುವುದು ಭರವಸೆ ಮೂಡಿಸಿದೆ. ಇನ್ನು ಹನುಮ ವಿಹಾರಿ ಕೂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ." ಎಂದು ಅವರು ವಿಶ್ಲೇಷಿಸಿದ್ದಾರೆ.