ಚೆನ್ನೈ (ತಮಿಳುನಾಡು): ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ 3 ರನ್‌ನಿಂದ ಶತಕ ವಂಚಿತರಾದರು. 97ಕ್ಕೆ ಔಟಾಗದಿದ್ದರೂ, ಪಂದ್ಯ ಗೆದ್ದ ಕಾರಣ ಅವರಿಗೆ ಶತಕ ದಾಖಲಿಸಲು ಸಾಧ್ಯವಾಗಿರಲಿಲ್ಲ. ಸಿಕ್ಸ್ ಹೊಡೆದು ಪಂದ್ಯ ಗೆಲ್ಲಿಸಿದರೂ ರಾಹುಲ್ ಮೊಗದಲ್ಲಿ ಬೇಸರದ ಜೊತೆಗೆ ಸಂತೋಷವೂ ಕಂಡುಬಂದಿತ್ತು.
ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವಿಕರಿಸಿದಾಗ ಇಯಾನ್ ಬಿಷಪ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಶತಕ ಮಾಡುವ ಲೆಕ್ಕಾಚಾರದಲ್ಲಿ ಕೊನೆಗೆ ಬ್ಯಾಟಿಂಗ್ ಮಾಡಿದ್ದಾಗಿ ಹೇಳಿದ್ದಾರೆ. 91 ರನ್ ಗಳಿಸಿದ್ದ ರಾಹುಲ್ಗೆ ಶತಕಕ್ಕೆ 9 ರನ್ ಬೇಕಿತ್ತು. ಆದರೆ ಪಂದ್ಯದ ಗೆಲುವಿಗೆ 5 ರನ್ ಸಾಕಿತ್ತು. ಈ ಸಂದರ್ಭದಲ್ಲಿ ರಾಹುಲ್ ಒಂದು ಬೌಂಡರಿ ಮತ್ತು ಸಿಕ್ಸ್ನ ಲೆಕ್ಕಾಚಾರದಲ್ಲಿದ್ದರು. ಆದರೆ 42ನೇ ಓವರ್ನ ಎರಡನೇ ಬಾಲ್ನಲ್ಲಿ ರಾಹುಲ್ ಬೌಂಡರಿ ಗಳಿಸಲು ಹೊಡೆದ ಶಾಟ್ ಸಿಕ್ಸ್ ಆಗಿತ್ತು. ಹೀಗಾಗಿ ರಾಹುಲ್ ಶತಕ ಕೈತಪ್ಪಿತ್ತು.
ರಾಹುಲ್ ದಾಖಲಿಸಿದ 97 ರನ್ ಕೂಡಾ ಅವಿಸ್ಮರಣೀಯ ಇನ್ನಿಂಗ್ಸ್ ಆಗಿತ್ತು. ಏಕೆಂದರೆ, ಇದೇ ಮೈದಾನದಲ್ಲಿ 48 ವರ್ಷಗಳ ಹಿಂದೆ ಕನ್ನಡಿಗರೊಬ್ಬರು ಗಳಿಸಿದ 97 ರನ್ ಸಹ ಇಂಥದೇ ಗೆಲುವಿಗೆ ಕಾರಣವಾಗಿತ್ತು. ಈಗ ರಾಹುಲ್ ದಿಗ್ಗಜ ಬ್ಯಾಟರ್ನ ಪಟ್ಟಿ ಸೇರಿಕೊಂಡಿದ್ದಾರೆ. ಅಲ್ಲದೇ ಸಂಕಷ್ಟದಲ್ಲಿದ್ದ ಭಾರತಕ್ಕೆ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರ 165 ರನ್ ಪಾಲುದಾರಿಕೆಯ ಇನ್ನಿಂಗ್ಸ್ ವಿಜಯಕ್ಕೆ ಕಾರಣವಾಗಿತ್ತು.
- " class="align-text-top noRightClick twitterSection" data="">
48 ವರ್ಷ ಹಿಂದಿನ ಪಂದ್ಯ: 1969 ರಿಂದ 1983ರ ವರೆಗೆ ಭಾರತೀಯ ತಂಡದಲ್ಲಿ ಆಡಿದವರು ಕರ್ನಾಟಕದ ದಿಗ್ಗಜ ಆಟಗಾರ ಗುಂಡಪ್ಪ ರಂಗನಾಥ ವಿಶ್ವನಾಥ್. 1975 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಜಿ.ಆರ್.ವಿಶ್ವನಾಥ್ ಗಳಿಸಿದ 97 ರನ್ಗಳ ಆಟ ಇಂದಿಗೂ ಸ್ಮರಣೀಯ. ಏಕೆಂದರೆ ನಾಲ್ಕು ದಶಕಗಳ ಹಿಂದೆ ಭಾರತ ಕ್ರಿಕೆಟ್ ಶಿಶುವಾಗಿತ್ತು. ವೆಸ್ಟ್ ಇಂಡೀಸ್ ಅಂದು ವಿಶ್ವದ ಅಗ್ರ ಕ್ರಿಕೆಟ್ ರಾಷ್ಟವಾಗಿತ್ತು. 1975ರ ವಿಶ್ವಕಪ್ಗೂ ಮುನ್ನ ನಡೆದ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ಅನ್ನು ಚೆನ್ನೈ ಮೈದಾನದಲ್ಲಿ 100 ರನ್ಗಳಿಂದ ಮಣಿಸಿತ್ತು.
ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ವೆಸ್ಟ್ ಇಂಡೀಸ್ ಬೌಲಿಂಗ್ ಮುಂದೆ ವಿಕೆಟ್ ಕೈಚೆಲ್ಲುತ್ತಾ ಸಾಗಿತು. ಈ ವೇಳೆ ಕ್ರೀಸ್ನಲ್ಲಿ ಏಕಾಂಗಿಯಾಗಿ ನಿಂತು ಹೋರಾಡಿದವರು ಕನ್ನಡಿಗ ಗುಂಡಪ್ಪ. ಇವರ ಅಜೇಯ 97 ರನ್ಗಳ ನೆರವಿನಿಂದ ಭಾರತ ಅಂದು ಮೊದಲ ಇನ್ನಿಂಗ್ಸ್ನಲ್ಲಿ 190 ರನ್ ಗಳಿಸಿತ್ತು. ಗುಂಡಪ್ಪ 14 ಬೌಂಡರಿಯಿಂದ 97 ರನ್ ಕಲೆಹಾಕಿದ್ದರು. ನಂತರ ವೆಸ್ಟ್ ಇಂಡೀಸ್ ಪ್ರಥಮ ಇನ್ನಿಂಗ್ಸ್ನಲ್ಲಿ 2 ರನ್ (192) ಲೀಡ್ ಪಡೆದುಕೊಂಡು ಸರ್ವಪತನ ಕಂಡಿತ್ತು.
ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ಅಂಶುಮಾನ್ ಗಾಯಕ್ವಾಡ್ ಅವರ 80 ರನ್ ಮತ್ತು ಗುಂಡಪ್ಪ ಅವರ 46 ರನ್ಗಳ ಸಹಾಯದಿಂದ 256 ರನ್ ಪೇರಿಸಿತ್ತು. 254 ರನ್ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ತಂಡ 154ಕ್ಕೆ ಸರ್ವಪತನ ಕಂಡಿತ್ತು. ಏರಪಲ್ಲಿ ಪ್ರಸನ್ನ 4, ಬಿಷನ್ ಬೇಡಿ 3 ಮತ್ತು ಭಾಗವತ್ ಚಂದ್ರಶೇಖರ್ 2 ವಿಕೆಟ್ ಕಬಳಿಸಿದ್ದರು. ಇದರಿಂದ 100 ರನ್ಗಳ ಗೆಲುವು ದಾಖಲಿಸಿತ್ತು. ಅಂದು ಗುಂಡಪ್ಪ ಪ್ರಥಮ ಇನ್ನಿಂಗ್ಸ್ನಲ್ಲಿ ಗಳಿಸಿದ 97 ರನ್ ಭಾರತಕ್ಕೆ ಆಸರೆಯಾಗಿತ್ತು. ಇದನ್ನು ಇಂದಿಗೂ ಕ್ರಿಕೆಟ್‌ಪ್ರೇಮಿ ಕನ್ನಡಿಗರು ನೆನೆಯುತ್ತಾರೆ.
ಇದನ್ನೂ ಓದಿ: ICC Cricket World Cup 2023: ಕೆಎಲ್ ರಾಹುಲ್ಗೆ ಗಾಯವೇ ವರವಾಯ್ತೆ?.. ಕಮ್ಬ್ಯಾಕ್ ಬಳಿಕ ರೊಚ್ಚಿಗೇಳುತ್ತಿರುವ ಕನ್ನಡಿಗ!