ಬೆಂಗಳೂರು: ರಣಜಿ ಟ್ರೋಫಿಯ ಮೊದಲ ಎರಡು ಪಂದ್ಯಗಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಅನುಭವಿ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ತಂಡದ ನಾಯಕರಾಗಿ ಮುಂದುವರೆದಿದ್ದು, ಯುವ ಬ್ಯಾಟ್ಸ್‌ಮನ್ ನಿಕಿನ್ ಜೋಸ್ ಅವರನ್ನು ತಂಡದ ಉಪನಾಯಕನಾಗಿ ಹೆಸರಿಸಲಾಗಿದೆ.
ಶುಭಾಂಗ್, ಶಶಿಕುಮಾರ್, ರೋಹಿತ್ ಕುಮಾರ್ಗೆ ಸ್ಥಾನ: ಬುಧವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ರಣಜಿ ಟ್ರೋಫಿಯ ಮೊದಲ ಎರಡು ಪಂದ್ಯಗಳಿಗೆ 16 ಸದಸ್ಯರ ತಂಡ ಪ್ರಕಟಿಸಿದ್ದು, ಅನುಭವಿ ಆಲ್ ರೌಂಡರ್ ಕೆ. ಗೌತಮ್, ವಿಕೆಟ್ ಕೀಪರ್ ಬಿ. ಆರ್. ಶರತ್ ಮತ್ತು ಎಡಗೈ ಸ್ಪಿನ್ನರ್ ಜೆ. ಸುಚಿತ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಬದಲಿಗೆ ಎಡಗೈ ಸ್ಪಿನ್ನರ್ ಶುಭಾಂಗ್ ಹೆಗಡೆ, ಆಫ್‌ಸ್ಪಿನ್ನರ್ ಕೆ. ಶಶಿಕುಮಾರ್ ಮತ್ತು ಎಡಗೈ ಸ್ಪಿನ್ನರ್ ಎ. ಸಿ. ರೋಹಿತ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಡಿ. ನಿಶ್ಚಲ್ ನಾಲ್ಕು ವರ್ಷಗಳ ಬಳಿಕ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚಿಗೆ ಮುಂಬೈ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಕರ್ಷಕ ಶತಕ ಗಳಿಸಿದ್ದ ನಿಶ್ಚಲ್, ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜನವರಿ 5 ರಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಕರ್ನಾಟಕ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ. ಜನವರಿ 12 ರಂದು ಆರಂಭವಾಗಲಿರುವ ದ್ವಿತೀಯ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೆಣಸಲಿದೆ.
ಕರ್ನಾಟಕ ತಂಡ ಆಟಗಾರ ಮಾಹಿತಿ: ಮಯಾಂಕ್ ಅಗರ್ವಾಲ್ (ನಾಯಕ), ರವಿಕುಮಾರ್ ಸಮರ್ಥ, ದೇವದತ್ ಪಡಿಕ್ಕಲ್, ನಿಕಿನ್ ಜೋಸ್ (ಉಪನಾಯಕ), ಮನೀಶ್ ಪಾಂಡೆ, ಶುಭಾಂಗ್ ಪಾಂಡೆ, ಶರತ್ ಶ್ರೀನಿವಾಸ್, ವೈಶಾಖ್ ವಿಜಯಕುಮಾರ್, ವಾಸುಕಿ ಕೌಶಿಕ್, ವಿದ್ವತ್ ಕಾವೇರಪ್ಪ, ಕೆ. ಶಶಿಕುಮಾರ್, ಸುಜಯ್ ಸಟೇರಿ, ಡಿ. ನಿಶ್ಚಲ್, ಎಂ. ವೆಂಕಟೇಶ್, ಕಿಶನ್ ಎಸ್. ಬೆದರೆ, ಎ. ಸಿ. ರೋಹಿತ್ ಕುಮಾರ್ ಕರ್ನಾಟಕ ತಂಡದಲ್ಲಿ ಆಡಲಿದ್ದಾರೆ.
ತಂಡದ ಕೋಚ್: ಪಿ. ವಿ. ಶಶಿಕಾಂತ್, ಬೌಲಿಂಗ್ ಕೋಚ್ - ಮನ್ಸೂರ್ ಅಲಿ ಖಾನ್, ಫೀಲ್ಡಿಂಗ್ ಕೋಚ್ - ಶಬರೀಶ್ ಪಿ. ಮೋಹನ್, ಮ್ಯಾನೇಜರ್ - ಆರ್. ರಮೇಶ್ ರಾವ್, ಫಿಸಿಯೊ - ಎ. ಜಾಬಪ್ರಭು, ಸ್ಟ್ರೆಂಥ್ ಮತ್ತು ಕಂಡಿಷನಿಂಗ್ ಕೋಚ್ - ಎ. ಕಿರಣ್. ಮಸಾಜ್ ಪರಿಣತ - ಸಿ. ಎಂ. ಸೋಮಸುಂದರ್, ವಿಡಿಯೋ ಅನಾಲಿಸ್ಟ್ - ಗಿರಿಧರ್.
ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್: ಎಲ್ಗರ್ ಆಕರ್ಷಕ ಶತಕ, ಹರಿಣಗಳಿಗೆ 11 ರನ್ ಮುನ್ನಡೆ