ಮುಂಬೈ: ಜಾರ್ಖಂಡ್ ಯುವ ಪೇಸರ್ ಸುಶಾಂತ್ ಮಿಶ್ರಾ ಗಾಯಗೊಂಡಿರುವ ಸೌರವ್ ದುಬೆ ಬದಲಿಗೆ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ದುಬೆ ಬೆನ್ನು ನೋವಿಗೆ ತುತ್ತಾಗಿದ್ದು, 2022ರ ಐಪಿಎಲ್ನಿಂದ ಹೊರಬಿದ್ದಿದ್ದಾರೆ.
21 ವರ್ಷದ ಎಡಗೈ ವೇಗಿ ಸುಶಾಂತ್ 4 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 13 ವಿಕೆಟ್ ಪಡೆದಿದ್ದಾರೆ. 2020ರ ಅಂಡರ್ 19 ವಿಶ್ವಕಪ್ ಫೈನಲ್ ತಲುಪಿದ್ದ ಭಾರತ ತಂಡದಲ್ಲಿದ್ದ ಮಿಶ್ರಾ 5 ಪಂದ್ಯಗಳಿಂದ 7 ವಿಕೆಟ್ ಪಡೆದಿದ್ದರು. ಇದೀಗ 20 ಲಕ್ಷ ಮೂಲ ಬೆಲೆಗೆ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರಿಕೊಂಡಿದ್ದಾರೆ.
ಕೇನ್ ವಿಲಿಯಮ್ಸನ್ ಮುನ್ನಡೆಸುತ್ತಿರುವ ಹೈದರಾಬಾದ್ ತಂಡ ಕಳೆದ ಆವೃತ್ತಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು. ಆದರೆ, ಇದೀಗ ಮೊದಲ ಎರಡು ಸೋಲು ಕಂಡ ನಂತರ ಅದ್ಭುತ ಕಮ್ಬ್ಯಾಕ್ ಮಾಡಿ ಸತತ 5 ಪಂದ್ಯಗಳಲ್ಲಿ ಗೆದ್ದು ಟಾಪ್ 4ರಲ್ಲಿ ಕಾಣಿಸಿಕೊಂಡಿತ್ತು. ಆದರೆ, ಕಳೆದ 2 ಪಂದ್ಯಗಳಲ್ಲಿ ರೋಚಕ ಸೋಲು ಕಂಡಿದ್ದು ಮುಂದಿನ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ದುಬೆ ಅಲ್ಲದೆ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಆದರೆ ಅಷ್ಟೇನು ಪರಿಣಾಮ ಬೀರಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಭಾರತ 2019ರ ವಿಶ್ವಕಪ್ ಸೋಲಿನ ಕಾರಣ ತಿಳಿಸಿದ ಯುವರಾಜ್ ಸಿಂಗ್