ದುಬೈ: ಈ ವರ್ಷದ ಐಸಿಸಿ ಟಿ-20 ವಿಶ್ವಕಪ್ ಸ್ಪಿನ್ನರ್ಗಳ ವಿಶ್ವಕಪ್ ಆಗಲಿದೆ ಎಂದು ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅಭಿಪ್ರಾಯಪಟ್ಟಿದ್ದು, ಒಂದು ವೇಳೆ, ತಮ್ಮ ತಂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಒಳ್ಳೆ ಸ್ಕೋರ್ ಮಾಡಿದರೆ ಚುಟುಕು ಮಹಾಸಮರದಲ್ಲಿ ಯಾವುದೇ ತಂಡಕ್ಕಾದರೂ ಸೋಲುಣಿಸಲಬಲ್ಲೆವು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್ ಕೋವಿಡ್ 19 ಕಾರಣದಿಂದ ಯುಎಇಗೆ ವರ್ಗಾವಣೆಗೊಂಡಿದೆ. ಕ್ವಾಲಿಫೈಯರ್ ಪಂದ್ಯಗಳು ಒಮಾನ್ನಲ್ಲೂ, ಸೂಪರ್12ರಿಂದ ಫೈನಲ್ವರೆಗೆ ಯುಎಇಯಲ್ಲೂ ನಡೆಯಲಿವೆ. ಈ ಕಾರಣದಿಂದ ರಶೀದ್ 2021ರ ವಿಶ್ವಕಪ್ ಸ್ಪಿನ್ನರ್ಗಳಿಗೆ ಸೇರಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
2017ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ರಶೀದ್ ಖಾನ್ ಅವರನ್ನು ಆಯ್ಕೆ ಮಾಡಿಕೊಂಡಾಗಿನಿಂದ ಟಿ-20 ಕ್ರಿಕೆಟ್ನಲ್ಲಿ ರಶೀದ್ ವಿಶ್ವದ ಅಗ್ರ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದಾರೆ.
ಅವರು ಕಳೆದ ನಾಲ್ಕು ವರ್ಷಗಳಲ್ಲಿ ವಿಶ್ವದಾದ್ಯಂತ ಹಲವು ಲೀಗ್ಗಳಿಂದ ಒಟ್ಟು 333 ವಿಕೆಟ್ ಪಡೆದುಕೊಂಡಿದ್ದಾರೆ. ಎರಡನೇ ಬಾರಿಗೆ ಟಿ20 ವಿಶ್ವಕಪ್ ಆಡಲಿರುವ ರಶೀದ್ ಯುಎಇಯಲ್ಲಿ ಸ್ಪಿನ್ನರ್ಗಳ ಪರಿಣಾಮಕಾರಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
" ಇಲ್ಲಿನ ವಾತಾವರಣ ಸ್ಪಿನ್ನರ್ಗಳಿಗೆ ಹೇಳಿ ಮಾಡಿಸಿದಂತಿದೆ. ಹಾಗಾಗಿ ಇದು ಸ್ಪಿನ್ನರ್ಗಳ ವಿಶ್ವಕಪ್. ಇಲ್ಲಿನ ಪಿಚ್ಗಳನ್ನು ಹೇಗೆ ಸಿದ್ಧಪಡಿಸಿದರೂ ಕೊನಗೆ ಸ್ಪಿನ್ನರ್ಗಳಿಗೆ ನೆರವಾಗುತ್ತವೆ. ಈ ವಿಶ್ವಕಪ್ನಲ್ಲಿ ಸ್ಪಿನ್ನರ್ಗಳು ಬಹುದೊಡ್ಡ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ನಾವು ಅದನ್ನು ಐಪಿಎಲ್ನಲ್ಲಿ ಈಗಾಗಲೇ ನೋಡಿದ್ದೇವೆ. ಸ್ಪಿನ್ನರ್ಗಳು ಯಾವುದೇ ಸಂದರ್ಭದಲ್ಲಿ ಪಂದ್ಯವನ್ನು ತಮ್ಮ ತಂಡಕ್ಕೆ ತಿರುಗಿಸಬಲ್ಲರು. ಹಾಗಾಗಿ ವಿಶ್ವಕಪ್ನಲ್ಲೂ ಹಾಗೆ ಆಗಬಲ್ಲದು ಎಂದು ನಾನು ಭಾವಿಸುತ್ತೇನೆ" ಎಂದು ರಶೀದ್ ಖಾನ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಅಫ್ಘಾನಿಸ್ತಾನ ವಿಶ್ವಕಪ್ನಲ್ಲಿ ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ತಂಡಗಳಿರುವ 2ನೇ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಹಾಗಾಗಿ ಎದುರಾಳಿಗಳಲ್ಲೂ ಉತ್ತಮ ಸ್ಪಿನ್ ಬೌಲರ್ಗಳಿದ್ದು, ಅವರನ್ನು ಮಣಿಸಬೇಕಾದರೆ ಕಠಿಣ ಪರಿಶ್ರಮದ ಅವಶ್ಯಕತೆ ಇದೆ ಎಂದು ರಶೀದ್ ಹೇಳಿದ್ದಾರೆ.
ನೀವು ಎಷ್ಟು ಸಾಧ್ಯವೋ ಅಷ್ಟು ಉತ್ತಮ ಮೊತ್ತ ದಾಖಲಿಸಿದರೆ ಇಂತಹ ಸ್ಕಿಡ್ಡಿ, ಸ್ಲೋ ಟ್ರಾಕ್ ಪಿಚ್ಗಳಲ್ಲಿ ಸ್ಪಿನ್ನ ಬೌಲರ್ಗಳು ನಿಮಗೆ ತುಂಬಾ ನೆರವಾಗಲಿದ್ದಾರೆ. ಸ್ಪಿನ್ ಬೌಲರ್ಗಳು ತಮ್ಮ ಕೌಶಲ್ಯಗಳನ್ನು ತೋರಿಸಿ ವಿಕೆಟ್ ಪಡೆಯಬಹುದು. ಈ ವಿಶ್ವಕಪ್ನಲ್ಲಿ ನಾವು ಉತ್ತಮವಾಗಿ ಬ್ಯಾಟ್ ಮಾಡಿದರೆ, ಯಾವುದೇ ತಂಡವನ್ನಾದರೂ ಸೋಲಿಸಬಲ್ಲೆವು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ 2021ರ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರದಿದ್ದರೂ ರಶೀದ್ ಖಾನ್ ತಮ್ಮ ಬೌಲಿಂಗ್ ಎಂಜಾಯ್ ಮಾಡಿದ್ದಾರೆ. ಅವರು ಲೀಗ್ನಲ್ಲಿ 18 ವಿಕೆಟ್ ಪಡೆಯುವ ಮೂಲಕ ಯುಜ್ವೇಂದ್ರ ಚಹಾಲ್ ಮತ್ತು ವರುಣ್ ಚಕ್ರವರ್ತಿಜೊತೆಗೆ ಗರಿಷ್ಠ ವಿಕೆಟ್ ಪಡೆದ ಸ್ಪಿನ್ ಬೌಲರ್ ಎನಿಸಿಕೊಂಡಿದ್ದರು.
ಇದನ್ನು ಓದಿ:ಪಾಕ್ ಪರ U-19 ವಿಶ್ವಕಪ್ ಆಡಿದ ವೇಗಿ ಈಗ ಓಮನ್ ತಂಡದ ಪ್ರಮುಖ ಆಟಗಾರ