ವಿರಾಟ್ ಕೊಹ್ಲಿ ಫೀಲ್ಡ್ನಲ್ಲಿರುವಾಗ ಫುಲ್ ಆಕ್ಟಿವ್ ಆಗಿರ್ತಾರೆ. ಪ್ರತಿ ಎಸೆತದ ನಂತರ ತಮ್ಮ ಭಾವನೆಗಳನ್ನು ತನ್ನದೇ ಶೈಲಿಯಲ್ಲಿ ಹೊರಹಾಕುತ್ತಿರುತ್ತಾರೆ. ಅಗ್ರೆಸಿವ್ ನಡವಳಿಕೆಯನ್ನು ಜನರೂ ಮೆಚ್ಚುತ್ತಾರೆ. ಹಾಗೆಯೇ ವಿರಾಟ್ ವೈಖರಿಗೆ ಆಪಾದನೆಗಳೂ ಇವೆ. ವಿರಾಟ್ ಕೊಹ್ಲಿಗೆ ಮೂಗಿನ ತುದಿಯಲ್ಲೇ ಕೋಪ ಇರುತ್ತದೆ ಎಂದರೆ ತಪ್ಪಾಗದು. ಅವರನ್ನು ಕೆಣಕಿದರೆ ಅದಕ್ಕೆ ಪ್ರತ್ಯುತ್ತರ ನೀಡಿಯೇ ತೀರುತ್ತಾರೆ, ಅದು ಅವರ ನಡವಳಿಕೆ. ಕ್ರೀಡಾಂಗಣದಲ್ಲಿ ಪ್ರತಿ ಕ್ಷಣವನ್ನೂ ಆನಂದಿಸುತ್ತಾರೆ. ವಿಕೆಟ್ ಉರುಳಿದಾಗ ಬೌಲರ್‌ಗಿಂತಲೂ ಹೆಚ್ಚೇ ವಿರಾಟ್ ಸಂಭ್ರಮಿಸುತ್ತಾರೆ.
ನಿನ್ನೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ಕೋಡ್ ಆಫ್ ಕಂಡಕ್ಟ್ ಉಲ್ಲಂಘಿಸಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿಗೆ ಪಂದ್ಯದ ಶುಲ್ಕದ ಶೇ 10ರಷ್ಟು ದಂಡ ಹಾಕಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ಅಡಿಯಲ್ಲಿ ಮೊದಲನೇ ಹಂತದ ಅಪರಾಧ ಮಾಡಿರುವುದಾಗಿ ಕೊಹ್ಲಿ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಪಂದ್ಯದ ರೆಫರಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿದೆ ಎಂದು ತಿಳಿಸಿದ್ದಾರೆ.
ದಂಡ ಏಕೆ?: ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್ಗಿಳಿಯಿತು. ತಂಡವು ಉತ್ತಮ ಫಾರ್ಮ್ನಲ್ಲಿರುವ ರುತುರಾಜ್ ಗಾಯಕ್ವಾಡ್ ಮತ್ತು ಅಜಿಂಕ್ಯಾ ರಹಾನೆ ವಿಕೆಟ್‌ಗಳನ್ನು ಬೇಗ ಕಳೆದುಕೊಂಡಿತು. ನಂತರ ಕ್ರೀಸ್ಗೆ ಬಂದ ಶಿವಂ ದುಬೆ ಹಾಗು ಮತ್ತೋರ್ವ ಆರಂಭಿಕ ಕಾನ್ವೆ ಅವರ ಜೊತೆ ಸೇರಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ಆರ್ಸಿಬಿಯ ಬೌಲರ್ಗಳ ಎಸೆತಗಳನ್ನು ಮನಬಂದಂತೆ ದಂಡಿಸಿದರು. ಇವರಿಬ್ಬರ ಬ್ಯಾಟಿಂಗ್ ಬಲದಿಂದ ಸಿಎಸ್‌ಕೆ ಬೃಹತ್ ಮೊತ್ತದತ್ತ ಸಾಗುತ್ತಿತ್ತು. 16.3 ಓವರ್ನಲ್ಲಿ 52 ರನ್ ಗಳಿಸಿದ್ದ ದುಬೆ ಪಾರ್ನೆಲ್ ಬಾಲ್ನಲ್ಲಿ ಕ್ಯಾಚ್ ಕೊಟ್ಟರು. ಈ ವೇಳೆ ವಿರಾಟ್ ಕೊಹ್ಲಿ ಬೌಂಡರಿ ಲೈನ್ನಲ್ಲಿ ಸಂಭ್ರಮಿಸಿದ ರೀತಿಗೆ ದಂಡ ಹಾಕಲಾಗಿದೆ.
ಮೊದಲು ಬ್ಯಾಟ್ ಮಾಡಿದ್ದ ಸಿಎಸ್‌ಕೆ ಡೆವೊನ್ ಕಾನ್ವೆ (83) ಮತ್ತು ಶಿವಂ ದುಬೆ (52) ಅವರ ಇನ್ನಿಂಗ್ಸ್ ಸಹಾಯದಿಂದ 226 ರನ್ ಗಳಿಸಿತು. ಆರ್‌ಸಿಬಿ ತಂಡವು ನಾಯಕ ಫಾಫ್ ಡು ಪ್ಲೆಸಿಸ್ (62) ಮತ್ತು ಮಾಕ್ಸ್ವೆಲ್ (76) ರನ್‌ಗಳ ಸಹಾಯದಿಂದ ಗೆಲುವಿನ ಸಮೀಪ ಬಂದಿತ್ತು. ಆದರೆ, ಕೊನೆಯಲ್ಲಿ ವಿಕೆಟ್ ನಷ್ಟ ಅನುಭವಿಸಿ ನಿಗದಿತ ಓವರ್ನಲ್ಲಿ 218 ರನ್ ಗಳಿಸಿ 8 ರನ್ನಿಂದ ಪರಾಜಯಗೊಂಡಿತು.
ಕಳೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹೃತಿಕ್ ಶೋಕೀನ್‌ಗೆ ಇದೇ ರೀತಿಯ ದಂಡ ವಿಧಿಸಲಾಗಿತ್ತು. ಆರ್‌ಸಿಬಿ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಒಂದು ವಿಕೆಟ್ನ ಗೆಲುವು ಸಾಧಿಸಿದಾಗ ಆವೇಶ್ ಖಾನ್ ಸಂಭ್ರಮಿಸಿದ್ದಕ್ಕೆ ವಾರ್ನಿಂಗ್ ನೀಡಲಾಗಿತ್ತು.
ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಉತ್ತಮ ಆಟವಾಡಿದರೂ ಕೊಹ್ಲಿ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆಕಾಶ್ ಸಿಂಗ್ ಎಸೆತದಲ್ಲಿ ಬೌಂಡರಿ ಬಾರಿಸಿದ ನಂತರ, ಕೊಹ್ಲಿಗೆ ದುರಾದೃಷ್ಟ ಎದುರಾಗಿತ್ತು. ಚೆಂಡು ಬ್ಯಾಟ್‌ಗೆ ತಗುಲಿ ಪ್ಯಾಡ್ನಿಂದಾಗಿ ಇಳಿದು ವಿಕೆಟ್ಗೆ ತಾಗಿ ಔಟ್ ಆದರು. ಫಲಿತಾಂಶದ ನಂತರ ಆರ್‌ಸಿಬಿ ಅಂಕ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದ್ದರೆ, ಸಿಎಸ್‌ಕೆ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದೆ.
ಇದನ್ನೂ ಓದಿ: ದಾಖಲೆಯ ವೀಕ್ಷಣೆ ಪಡೆದ ಜಿಯೋ ಸಿನಿಮಾ: ಚೆನ್ನೈ - ಬೆಂಗಳೂರು ಪಂದ್ಯದ ವೇಳೆ ಮತ್ತೊಂದು ದಾಖಲೆ