ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಈ ವರ್ಷ ಮತ್ತೆ ಕಳೆಗಟ್ಟಿದೆ. ಅದಕ್ಕೆ ಕಾರಣ ಕೋವಿಡ್ ದೂರ ಸರಿದಿರುವುದು. 2018ರ ನಂತರ ಮತ್ತೆ ತವರು ಮೈದಾನ ಮತ್ತು ಪ್ರವಾಸಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ನಾಲ್ಕು ವರ್ಷಗಳ ನಂತರ ತವರಿನಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ. ಇದರಿಂದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ವಿರುಷ್ಕಾ ಜೋಡಿಯ ಬೆಂಗಳೂರು ಪಯಣ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಂದು ಬೆಂಗಳೂರಿನಲ್ಲಿ ಸುತ್ತಾಡಿದ್ದಾರೆ. ಐಪಿಎಲ್ ಟೂರ್ನಿಯ ಮಧ್ಯೆ ಕೊಂಚ ಸಮಯ ಮಾಡಿಕೊಂಡ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ಮಲ್ಲೇಶ್ವರದ ಸಿಟಿಆರ್ (ಸೆಂಟ್ರಲ್ ಟಿಫಿನ್ ರೂಂ) ಹೋಟೆಲ್ಗೆ ತೆರಳಿ ದೋಸೆ ಸವಿದಿದ್ದಾರೆ.
ಅನಿಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಸುಮಾರು 8 ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೋಟೆಲ್ನಲ್ಲಿ ಸವಿದ ಫುಡ್ಗಳ ಜೊತೆಗೆ ಮೆನುವನ್ನು ಶೇರ್ ಮಾಡಿಕೊಂಡಿದ್ದಾರೆ. ಮಸಾಲೆದೋಸೆ, ಮಂಗಳೂರು ಬೋಂಡಾ ಮತ್ತು ಕೇಸರಿಬಾತ್ ಸ್ವಾದಿಷ್ಟಕರವಾಗಿತ್ತು ಎಂದು ಇಷ್ಟಪಟ್ಟು ಇನ್ಸ್ಟಾದಲ್ಲಿ ಬರೆದುಕೊಂಡಿದ್ದು, ಇನ್ನೊಮ್ಮ ಬರುವುದಾಗಿ ಹೇಳಿದ್ದಾರೆ. ಈ ಬಾರಿ ಬಹುತೇಕ ಪಂದ್ಯಗಳಲ್ಲಿ ವಿರಾಟ್ ಜೊತೆ ಅನುಷ್ಕಾ ಪ್ರಯಾಣ ಮಾಡುತ್ತಿದ್ದಾರೆ.

ಕೊಹ್ಲಿ ದಂಪತಿ ಒಳಗೆ ದೋಸೆ ಸವಿಯುತ್ತಿದ್ದರೆ ಹೊರಗಡೆ ಆರ್ಸಿಬಿ ಎಂದು ಕೂಗು ಮೊಳಗಿತ್ತು. ಹೋಟೆಲ್ ಹೊರಗೆ ಸ್ಟಾರ್ ದಂಪತಿ ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು.
ವಿರಾಟ್ ಕೊಹ್ಲಿ ಬೆಂಗಳೂರನ್ನು ಎರಡನೇ ತವರು ಎಂದು ಕರೆದಿದ್ದಾರೆ. ಅದಕ್ಕೆ ಕಾರಣ 2008 ರಿಂದ ಆರ್ಸಿಬಿಯಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿಗೆ ಇಲ್ಲಿಯ ಅಭಿಮಾನಿಗಳು ಕೊಟ್ಟಿರುವ ಪ್ರೀತಿ ಆ ರೀತಿಯದ್ದಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 10 ತಂಡಗಳಿವೆ. ಆದರೆ, ಆರ್ಸಿಬಿಯ ಅಭಿಮಾನ ಬೇರೆ ಹಂತದಲ್ಲಿದೆ. ಆರ್ಸಿಬಿಯ 16 ವರ್ಷಗಳ ಜರ್ನಿಯೇ ಹಾಗಿದೆ. ಐಪಿಎಲ್ನ ಬಹುತೇಕ ದಾಖಲೆಗಳು ಈ ತಂಡದಲ್ಲಿದ್ದು, ಚಾಂಪಿಯನ್ ಪಟ್ಟಕ್ಕೆ ಮಾತ್ರ ಏರಿಲ್ಲ. ಕಪ್ ಗೆಲ್ಲದಿರುವುದೇ ಒಂದು ಸ್ಲೋಗನ್ ಆಗಿದ್ದು, ಇತ್ತೀಚಿನ ವರ್ಷಗಳಲ್ಲಿ "ಈ ಸಲ ಕಪ್ ನಮ್ದೆ" ಫೇಮಸ್ ಆಗಿತ್ತು.
ನಾಳೆ ರಾಜಸ್ಥಾನ್ ರಾಯಲ್ಸ್ ಆರ್ಸಿಬಿ ಪಂದ್ಯ: ನಾಳೆ ರಾಜಸ್ಥಾನ್ ವಿರುದ್ಧದ ಆರ್ಸಿಬಿ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಆರ್ಸಿಬಿ ಮತ್ತು ರಾಜಸ್ಥಾನ ತಂಡಗಳು ನಗರಕ್ಕೆ ಬಂದು ತಲುಪಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಳೆ ಹಸಿರು ಜರ್ಸಿಯಲ್ಲಿ ರಾಜಸ್ಥಾನ ರಾಯಲ್ ವಿರುದ್ಧ ಕಣಕ್ಕಿಳಿಯಲಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ನ್ನು ಸೋಲಿಸಿದ ಆರ್ಸಿಬಿ ಗೆಲುವಿನ ಲಯವನ್ನು ಮುಂದುವರೆಸುವ ಚಿಂತನೆಯಲ್ಲಿದೆ.
ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಏಪ್ರಿಲ್ 17 ರಂದು ನಡೆದ ಪಂದ್ಯದಲ್ಲಿ ಬೆಂಗಳೂರಿನ ಈ ಪಿಚ್ನಲ್ಲಿ ಸೋಲನುಭವಿಸಿತ್ತು. ಈ ತವರಿನ ಸೋಲಿನ ಕಹಿಯನ್ನು ಮರೆಸಲು ರಾಜಸ್ಥಾನವನ್ನು ಮಣಿಸಬೇಕಿದೆ. ಲಕ್ನೋ ವಿರುದ್ಧ ಸೋತಿರುವ ರಾಜಸ್ಥಾನ ನಾಳೆ ಗೆಲುವಿಗಾಗಿ ಹವಣಿಸುತ್ತಿದೆ.
ಇದನ್ನೂ ಓದಿ: ನಾಲ್ಕು ಇನ್ನಿಂಗ್ಸ್ಗಳ ಏಕದಿನದ ಅಭಿಪ್ರಾಯ ತಿಳಿಸಿದ ಸಚಿನ್: 50ನೇ ವಸಂತ ಪ್ರವೇಶಿಸುವ ಲಿಟಲ್ ಮಾಸ್ಟರ್ ವಿಶೇಷ ಸಂಭ್ರಮ