ಮುಂಬೈ: ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಧ್ಯಮ ಕ್ರಮಾಂಕದ ಬ್ಯಾಟರ್ ನಿತಿನ್ ರಾಣಾ 54ರನ್ ಹಾಗೂ ರಸೆಲ್ ಸ್ಫೋಟಕ 49ರನ್ಗಳ ಸಹಾಯದಿಂದ 175ರನ್ಗಳಿಕೆ ಮಾಡಿದೆ. ಈ ಮೂಲಕ ಎದುರಾಳಿ ತಂಡದ ಗೆಲುವಿಗೆ ಸ್ಪರ್ಧಾತ್ಮಕ ರನ್ ಗುರಿ ನೀಡಿದೆ.
ಮುಂಬೈನ ಬ್ರೆಬನ್ ಸ್ಟೇಡಿಯಂನಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಖಾಮುಖಿಯಾಗಿದ್ದು, ಟಾಸ್ ಸೋತ ಕೋಲ್ಕತ್ತಾ ಬ್ಯಾಟಿಂಗ್ ನಡೆಸಿತು. ಆರಂಭಿಕ ಆಘಾತದ ನಡುವೆ ಕೂಡ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಟವಾಡಿರುವ ಶ್ರೇಯಸ್ ಪಡೆ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 175ರನ್ಗಳಿಕೆ ಮಾಡಿದೆ.
ಆರಂಭಿಕರಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್(7), ಆರೊನ್ ಫಿಂಚ್(7) ನಿರಾಸೆ ಅನುಭವಿಸಿದರು. ಇದರ ಬೆನ್ನಲ್ಲೇ ಬಂದ ನರೈನ್(6) ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ತಂಡ ಕೇವಲ 31ರನ್ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಒಂದಾದ ಕ್ಯಾಪ್ಟನ್ ಅಯ್ಯರ್- ರಾಣಾ ತಂಡಕ್ಕೆ ಸ್ಪಲ್ಪ ಚೇತರಿಕೆ ನೀಡಿದರು. 28ರನ್ಗಳಿಕೆ ಮಾಡಿದ್ದ ವೇಳೆ ಶ್ರೇಯಸ್ ಅಯ್ಯರ್ ಉಮ್ರಾನ್ ಮಲಿಕ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬಂದ ಜಾಕ್ಸನ್ ಕೂಡ 7ರನ್ಗಳಿಕೆ ಔಟಾದರು.
ಮಿಂಚಿದ ರಾಣಾ-ರೆಸೆಲ್: ಮೇಲಿಂದ ಮೇಲೆ ವಿಕೆಟ್ ಉರುಳುತ್ತಿದ್ದರೂ, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನಿತಿಶ್ ರಾಣಾ ಹಾಗೂ ರೆಸೆಲ್ ಉತ್ತಮ ರನ್ಗಳಿಕೆ ಮಾಡಿದರು. ಈ ಜೋಡಿ ಎದುರಾಳಿ ಬೌಲರ್ಗಳನ್ನ ಸುಲಭವಾಗಿ ಎದುರಿಸಿದರು. ರಾಣಾ ತಾವು ಎದುರಿಸಿದ 36 ಎಸೆತಗಳಲ್ಲಿ 2 ಸಿಕ್ಸರ್, 6 ಬೌಂಡರಿ ಸಮೇತ 54ರನ್ಗಳಿಕೆ ಮಾಡಿ, ನಟರಾಜನ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಆದರೆ, ಕೊನೆಯವರೆಗೆ ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ದೈತ್ಯ ರೆಸೆಲ್ ತಾವು ಎದುರಿಸಿದ 25 ಎಸೆತಗಳಲ್ಲಿ 4 ಸಿಕ್ಸರ್, 4 ಬೌಂಡರಿ ಸಮೇತ ಅಜೇಯ 49ರನ್ಗಳಿಕೆ ಮಾಡಿದರು. ಈ ಮೂಲಕ ತಂಡ 175ರನ್ಗಳಿಕೆ ಮಾಡಿತು.
ಹೈದರಾಬಾದ್ ತಂಡದ ಪರ ಟಿ.ನಟರಾಜನ್ 3 ವಿಕೆಟ್, ಉಮ್ರಾನ್ ಮಲಿಕ್ 2 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್, ಜೆನ್ಸನ್ ಹಾಗೂ ಸುಚಿತ್ರ ತಲಾ 1 ವಿಕೆಟ್ ಪಡೆದುಕೊಂಡರು.