ನವಿ ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಾನಾಡಿದ 8 ಪಂದ್ಯಗಳಲ್ಲೂ ಸತತವಾಗಿ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್ ಕೊನೆಗೂ ಗೆಲುವಿನ ರುಚಿ ಅನುಭವಿಸಿತು. ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಚೆಂದದ ಜೊತೆಯಾಟ ಕ್ಯಾಪ್ಟನ್ ರೋಹಿತ್ ಶರ್ಮಾ ಹುಟ್ಟುಹಬ್ಬಕ್ಕೆ ಅದ್ಭುತ ಉಡುಗೊರೆಯಾಯಿತು.
ನವೀ ಮುಂಬೈನ ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ರಾಯಲ್ಸ್ ಪರವಾಗಿ ಜಾಸ್ ಬಟ್ಲರ್ ಏಕವ್ಯಕ್ತಿ ಪ್ರದರ್ಶನ ನೀಡಿ ತಂಡ ಉತ್ತಮ ರನ್ ಕಲೆ ಹಾಕಲು ನೆರವಾದರು. 52 ಎಸೆತಗಳಲ್ಲಿ 4 ಸಿಕ್ಸರ್ ಹಾಗು 5 ಬೌಂಡರಿಗಳ ಮೂಲಕ 67 ರನ್ ಸಿಡಿಸಿದರು. ದೇವದತ್ತ ಪಡಿಕಲ್ 15, ಸಂಜು ಸ್ಯಾಮ್ಸನ್ 16, ಡೇರಿಯಲ್ ಮಿಚೆಲ್ 17, ರವಿಚಂದ್ರನ್ ಅಶ್ವಿನ್ 21 ರನ್ ಗಳಿಸಿ ತಂಡಕ್ಕೆ ಸ್ವಲ್ಪಮಟ್ಟದ ಕೊಡುಗೆ ಕೊಟ್ಟರು. ಇನ್ನುಳಿದಂತೆ ಶಿಮ್ರಾನ್ ಹೆಟ್ಮೇರ್ 14 ಎಸೆತಗಳಿಗೆ 6 ರನ್ ಗಳಿಸಿದ್ದು ರನ್ ಮಟ್ಟ ಸ್ವಲ್ಪ ಕುಸಿಯಲು ಕಾರಣವಾಯಿತು. ಅಂತಿಮವಾಗಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಲು ರಾಜಸ್ಥಾನ ತಂಡಕ್ಕೆ ಸಾಧ್ಯವಾಯಿತು.
ಮುಂಬೈ ಪರ ಬೌಲರ್ಗಳಲ್ಲಿ ಹೃತಿಕ್ ಶೋಕಿನ್ 3 ಓವರ್ಗಳಲ್ಲಿ 47 ರನ್ ನೀಡಿ 2 ವಿಕೆಟ್ ಪಡೆದರೆ, ರಿಲೆ ಮೆರೆಡಿತ್ 4 ಓವರ್ಗಳಲ್ಲಿ 24 ರನ್ ನೀಡಿದ 2 ವಿಕೆಟ್ ಪಡೆದರು. ಡೇನಿಯಲ್ ಸ್ಯಾಮ್ಸ್ 4 ಓವರ್ಗಳಲ್ಲಿ 32 ರನ್ ನೀಡಿ ಒಂದು ವಿಕೆಟ್ ಪಡೆದರೆ, ಕುಮಾರ್ ಕಾರ್ತಿಕೇಯ 4 ಓವರ್ಗಳಲ್ಲಿ 19 ರನ್ ನೀಡಿ 1 ವಿಕೆಟ್ ಪಡೆದು ಅದ್ಭುತ ಆಟ ಪ್ರದರ್ಶಿಸಿದರು.
ರಾಜಸ್ಥಾನ ರಾಯಲ್ಸ್ ತಂಡ ನೀಡಿದ್ದ 159 ರನ್ಗಳ ಗುರಿ ಬೆನ್ನತ್ತಿದ ಮುಂಬೈ ತಂಡಕ್ಕೆ ಆರಂಭದಲ್ಲೇ ಆಘಾತವಾಯಿತು. 5 ಎಸೆತಗಳನ್ನು ಎದುರಿಸಿದ ಸ್ಕಿಪ್ಪರ್ ರೋಹಿತ್ ಶರ್ಮಾ ಕೇವಲ 2 ರನ್ ಗಳಿಸಿ ಆರ್. ಅಶ್ವಿನ್ಗೆ ವಿಕೆಟ್ ಒಪ್ಪಿಸಿದರು. ನಂತರ ಇಶಾನ್ ಕಿಶನ್ 18 ಎಸೆತಗಳಿಗೆ 26, ಸೂರ್ಯಕುಮಾರ್ ಯಾದವ್ 39 ಎಸೆತಗಳಿಗೆ 51, ತಿಲಕ್ ವರ್ಮಾ 30 ಎಸೆತಗಳಿಗೆ 35, ಕೀರನ್ ಪೊಲಾರ್ಡ್ 14 ಎಸೆತಗಳಲ್ಲಿ 10 ಮತ್ತ ಟಿಮ್ ಡೇವಿಡ್ 9 ಎಸೆತಗಳಲ್ಲಿ 20 ರನ್ ಗಳಿಸಿ, ಐದು ವಿಕೆಟ್ಗಳ ನಷ್ಟದಲ್ಲಿ 4 ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಮುಟ್ಟಿದರು.
ರಾಜಸ್ಥಾನ ತಂಡದ ಪರ ಟ್ರೆಂಟ್ ಬೋಲ್ಟ್, ಪ್ರಸಿದ್ಧ್ ಕೃಷ್ಣ, ಆರ್.ಅಶ್ವಿನ್, ಯಜುವೇಂದ್ರ ಚಾಹಲ್, ಕುಲದೀಪ್ ಸೇನ್ ತಲಾ ಒಂದು ವಿಕೆಟ್ ಪಡೆದರು. ಮುಂಬೈ ಇಂಡಿಯನ್ಸ್ ತಂಡದ ಸಂಘಟಿತ ಬ್ಯಾಟಿಂಗ್ ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ರಾಜಸ್ಥಾನ ರಾಯಲ್ಸ್ ತಂಡ ಸೋಲನುಭವಿಸುವಂತೆ ಮಾಡಿತು.
ಇದನ್ನೂ ಓದಿ: ಐಪಿಎಲ್ ಆವೃತ್ತಿಯೊಂದರಲ್ಲಿ ರಾಜಸ್ಥಾನ್ ಪರ ಗರಿಷ್ಠ ರನ್ ದಾಖಲಿಸಿದ ಜಾಸ್ ಬಟ್ಲರ್