ನವದೆಹಲಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಐಪಿಎಲ್-2021 ಟೂರ್ನಿಯನ್ನು ಬಿಸಿಸಿಐ ಮುಂದೂಡಿದೆ. ಕಳೆದ ಕೆಲವು ದಿನಗಳಿಂದ ಐಪಿಎಲ್ ತಂಡಗಳ ಆಟಗಾರರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಪರಿಣಾಮ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಕೆಕೆಆರ್, ಎಸ್ಆರ್ಹೆಚ್, ಸಿಎಸ್ಕೆ ತಂಡದ ಕೆಲವು ಆಟಗಾರರಿಗೆ ಕೊರೊನಾ ದೃಢಪಟ್ಟಿತ್ತು. ಕೋಲ್ಕತಾ ನೈಟ್‌ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ಗೆ ನಿನ್ನೆ ಕೊರೊನಾ ತಗುಲಿದ್ದು ವರದಿಯಾಗಿತ್ತು. ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಓ ಕೆ.ವಿಶ್ವನಾಥನ್, ಬೌಲಿಂಗ್ ಕೋಚ್ ಲಕ್ಷ್ಮಿಪತಿ ಬಾಲಾಜಿ ಹಾಗೂ ಬಸ್ ಕ್ಲೀನರ್ ಸೇರಿ ಮೂವರಿಗೆೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಇಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಟಗಾರ ವೃದ್ದಿಮಾನ್ ಸಹಾಗೆ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಬಿಸಿಸಿಐ, ಐಪಿಎಲ್ ಟೂರ್ನಿಯನ್ನು ಸದ್ಯಕ್ಕೆ ಮುಂದೂಡುವ ತುರ್ತು ನಿರ್ಧಾರ ಕೈಗೊಂಡಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.
ಇಷ್ಟು ದಿನ ಆಟಗಾರರು ಬಿಸಿಸಿಐಯ ಬಯೋಬಬಲ್ನಲ್ಲಿ ಸುರಕ್ಷಿತವಾಗಿದ್ದರು. ಒಟ್ಟು 29 ಪಂದ್ಯಗಳನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಚೆನ್ನೈ ಮತ್ತು ಮುಂಬೈಯಲ್ಲಿ ನಡೆಯಬೇಕಾಗಿದ್ದ ಪಂದ್ಯಗಳೆಲ್ಲವೂ ಪೂರ್ಣಗೊಂಡಿವೆ. ಆದರೆ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಸೀಸನ್ನ 30ನೇ ಪಂದ್ಯ ಆಡಲು ಸಾಧ್ಯವಾಗಿಲ್ಲ. ಕೆಕೆಆರ್ನ ಇಬ್ಬರು ಆಟಗಾರರಿಗೆ ಕೊರೊನಾ ಅಂಟಿಕೊಂಡಿದ್ದರಿಂದ ಸೋಮವಾರ ಆರ್ಸಿಬಿ ಮತ್ತು ಕೆಕೆಆರ್ ನಡುವೆ ನಡೆಯಬೇಕಿದ್ದ ಪಂದ್ಯ ರದ್ದು ಮಾಡಲಾಗಿತ್ತು.
ಇಂದು ನಡೆಯಬೇಕಿದ್ದ ಸನ್‌ರೈಸರ್ಸ್ ಮತ್ತು ಮುಂಬೈ ನಡುವಣ ಪಂದ್ಯಕ್ಕೂ ಆತಂಕದ ಛಾಯೆ ಆವರಿಸಿತ್ತು. ಯಾಕೆಂದರೆ, ಮುಂಬೈ ಶನಿವಾರ ಸಿಎಸ್ಕೆ ವಿರುದ್ಧ ಪಂದ್ಯ ಆಡಿತ್ತು. ಪಂದ್ಯದ ನಂತರ ಬಾಲಾಜಿ, ಆ ತಂಡದ ಆಟಗಾರರ ನೇರ ಸಂಪರ್ಕಕ್ಕೆ ಬಂದಿದ್ದರು. ಈಗ ಸನ್‌ರೈಸರ್ಸ್ ತಂಡದ ವೃದ್ಧಿಮಾನ್ ಸಹಾ ಅವರಿಗೂ ಕೂಡ ಕೊರೊನಾ ಪಾಸಿಟಿವ್ ಎಂಬ ಸುದ್ದಿ ಬಂದಿದೆ. ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ನ ಅಮಿತ್ ಮಿಶ್ರಾ ಅವರ ರಿಪೋರ್ಟ್ ಕೂಡಾ ಪಾಸಿಟಿವ್ ಇದೆ.
ಆಸ್ಟ್ರೇಲಿಯಾದ ಮೂವರು ಆಟಗಾರರು ಈಗಾಗಲೇ ಐಪಿಎಲ್ ಟೂರ್ನಿಯಿಂದ ಹೊರನಡೆದಿದ್ದಾರೆ.
ಐಪಿಎಲ್ ಫೈನಲ್ ಸೇರಿ ಒಟ್ಟು 31 ಪಂದ್ಯಗಳು ಬಾಕಿ ಉಳಿದಿವೆ. ಮೇ 30 ರಂದು ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯ ನಿಗದಿಯಾಗಿತ್ತು.