ಪುಣೆ: ಇದೇ ಮೊದಲ ಬಾರಿಗೆ ಐಪಿಎಲ್ಗೆ ಪದಾರ್ಪಣೆ ಮಾಡಿರುವ ಗುಜರಾತ್ ಟೈಟನ್ಸ್ ಭರ್ಜರಿ ಆಟವಾಡುತ್ತಿದೆ. ಸತತ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಶುಭಮನ್ ಗಿಲ್ ಆಕರ್ಷಕ ಬ್ಯಾಟಿಂಗ್ ಹಾಗೂ ಲಾಕಿ ಫರ್ಗ್ಯುಸನ್ ಬೌಲಿಂಗ್ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತತ್ತರಿಸಿತು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಗುಜರಾತ್ ಟೈಟನ್ಸ್ ಪರ ಶುಭಮನ್ ಗಿಲ್ 84 ರನ್ ಪೇರಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರು. ಕೇವಲ 46 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ಸಮೇತ 84 ರನ್ ಗಳಿಸಿದ ಅವರು, ತಂಡ ಹೆಚ್ಚು ರನ್ ಗಳಿಸಲು ನೆರವಾದರು. ಇನ್ನುಳಿದಂತೆ, ಡೇವಿಡ್ ಮಿಲ್ಲರ್ 20, ಹಾರ್ದಿಕ್ ಪಾಂಡ್ಯ 31 ರನ್ ಗಳಿಸಿ ತಂಡಕ್ಕೆ ತಂಡಕ್ಕೆ ತಮ್ಮದೇ ಕೊಡುಗೆ ನೀಡಿದರು. ಇನ್ನುಳಿದಂತೆ, ರಾಹುಲ್ ತೆವಾಟಿಯಾ 14, ವಿಜಯ್ ಶಂಕರ್ 13 ರನ್ ಕಲೆ ಹಾಕಿದರು. ಇವರೆಲ್ಲರ ನೆರವಿನಿಂದ ಗುಜರಾತ್ ಟೈಟನ್ಸ್ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲು ಸಾಧ್ಯವಾಯಿತು.
ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ (43) ಉತ್ತಮ ಆಟದ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಲಲಿತ್ ಯಾದವ್ 25, ರೋವ್ಮನ್ ಪೊವೆಲ್ 20, ಮಂದೀಪ್ ಸಿಂಗ್ 18, ಪೃಥ್ವಿ ಶಾ 10 ರನ್ ಗಳಿಸಿದರು.
ಗುಜರಾತ್ ಟೈಟನ್ಸ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಲಾಕಿ ಫರ್ಗೂಸನ್ 4 ಓವರ್ನಲ್ಲಿ 4 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 2, ಹಾರ್ದಿಕ್ ಪಾಂಡ್ಯಾ ಮತ್ತು ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದು, 157 ರನ್ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಕಟ್ಟಿಹಾಕಿದರು. ಡೆಲ್ಲಿ ಪರ ಮುಸ್ತಫಿಜುರ್ ರೆಹಮಾನ್ 3 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ 2, ಕುಲದೀಪ್ ಯಾದವ್ 1 ವಿಕೆಟ್ ಪಡೆದರು.
ಇದನ್ನೂ ಓದಿ: ಹರ್ನಿಯಾ ಚಿಕಿತ್ಸೆಗೆ ಒಳಗಾದ ಮೆಡ್ವಡೇವ್... ಫ್ರೆಂಚ್ ಓಪನ್ ಮಿಸ್ ಸಾಧ್ಯತೆ