ಮುಂಬೈ: 15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಗುಜರಾತ್ ಟೈಟನ್ಸ್ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿದೆ. ಈ ಸಲದ ಟೂರ್ನಿಯಲ್ಲಿ ಲೀಗ್ ಹಂತ, ಎಲಿಮಿನೇಟರ್, ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಗಳು ಒಟ್ಟು ಆರು ಮೈದಾನದಲ್ಲಿ ನಡೆದಿದ್ದು, ಅದಕ್ಕಾಗಿ ಕ್ರೀಡಾಂಗಣದ ಸಿಬ್ಬಂದಿ, ಪಿಚ್ ಕ್ಯುರೇಟರ್ಗಳು ಹಗಲಿರುಳು ಶ್ರಮಿಸಿದ್ದಾರೆ.
ಐಪಿಎಲ್ ಟೂರ್ನಿ ಯಶಸ್ವಿಯಾಗಿ ನಡೆಯಲು ಶ್ರಮಿಸಿರುವ ಎಲ್ಲ ಮೈದಾನಗಳ ಪಿಚ್ ಕ್ಯುರೇಟರ್ ಹಾಗೂ ಕ್ರೀಡಾಂಗಣದ ಸಿಬ್ಬಂದಿಗಳಿಗೆ ಭಾರತೀಯ ಕ್ರಿಕೆಟ್ ಮಂಡಳಿ ಭರ್ಜರಿ ಗಿಫ್ಟ್ ಘೋಷಣೆ ಮಾಡಿದೆ. ಲೀಗ್ ಹಂತದ 70 ಪಂದ್ಯಗಳು ಹಾಗೂ ಪ್ಲೇ-ಆಫ್ನ ಪಂದ್ಯಗಳು ಆಯೋಜನೆಗೊಂಡಿದ್ದ ಮೈದಾನದ ಸಿಬ್ಬಂದಿಗೆ 25 ಲಕ್ಷ ರೂ. ಘೋಷಣೆ ಮಾಡಿದ್ದಾರೆ. ಬ್ರಬೋರ್ನ್, ವಾಂಖೆಡೆ, ಡಿವೈ ಪಾಟೀಲ್ ಮತ್ತು ಪುಣೆಯ ಎಂಸಿಎ ಕ್ರೀಡಾಂಗಣ ಈ ಸಾಲಿನಲ್ಲಿ ಸೇರಿಕೊಂಡಿವೆ. ಉಳಿದಂತೆ ಕೋಲ್ಕತ್ತಾದ ಈಡನ್ ಗಾರ್ಡನ್ ಮತ್ತು ನರೇಂದ್ರ ಮೋದಿ ಸ್ಟೇಡಿಯಂನ ಸಿಬ್ಬಂದಿಗೆ ತಲಾ 12.5 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: 10 ಪಂದ್ಯಗಳಲ್ಲಿ ನಾಟ್ಔಟ್.. RCB ಈ ಆಟಗಾರನಿಗೆ ಒಲಿದ ಟಾಟಾ ಪಂಚ್ ಕಾರು!
ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ. 2022ರ ಟಾಟಾ ಐಪಿಎಲ್ ಯಶಸ್ವಿಯಾಗಿ ಶ್ರಮಿಸಿರುವ ಹೀರೋಗಳಿಗೆ 1.25 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಲು ನನಗೆ ಸಂತೋಷವಾಗುತ್ತದೆ ಎಂದಿದ್ದಾರೆ. ಐಪಿಎಲ್ ಟೂರ್ನಿ ಉದ್ಧಕ್ಕೂ ಪಿಚ್ ಕ್ಯುರೇಟರ್ ಹಾಗೂ ಕ್ರೀಡಾಂಗಣದ ಸಿಬ್ಬಂದಿಗಳಿಗೂ ಬಯೋ ಬಬಲ್ ವ್ಯವಸ್ಥೆ ಮಾಡಲಾಗಿತ್ತು. ಎರಡು ತಿಂಗಳ ಕಾಲ ಕುಟುಂಬದಿಂದ ಹೊರಗುಳಿದು ಕೆಲಸ ಮಾಡಿದ್ದಾರೆ.
ನರೇಂದ್ರ ಮೋದಿ ಮೈದಾನದಲ್ಲಿ ನಿನ್ನೆ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ.