ದುಬೈ: 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಗೇಲ್ ಲಭ್ಯ ಇರುವುದಿಲ್ಲ ಎಂದು ಪಂಜಾಬ್ ತಂಡ ತಿಳಿಸಿದ್ದು, ಕ್ರಿಸ್ ಗೇಲ್ ಬಯೋಬಬಲ್ ಆಯಾಸದಿಂದಾಗಿ ಐಪಿಎಲ್ ತೊರೆಯಲಿದ್ದಾರೆ ಎಂದು ಟ್ವೀಟ್ ಮಾಡಿದೆ.
ಕಳೆದ ಕೆಲ ತಿಂಗಳುಗಳಿಂದ ಐಪಿಎಲ್ ಸೇರಿದಂತೆ ವಿವಿಧ ಟೂರ್ನಿಗಳ ಕಠಿಣ ಬಯೋಬಬಲ್‌ನಲ್ಲಿದ್ದೇನೆ. ಸಿಡಬ್ಲ್ಯೂಐ, ಸಿಪಿಎಲ್ ನಂತರ ಐಪಿಎಲ್‌ನ ಬಯೋಬಬಲ್ ಭಾಗವಾಗಿದ್ದೇನೆ. ನಾನೀಗ ಮಾನಸಿಕವಾಗಿ ಸುಧಾರಿಸಿಕೊಳ್ಳುವ ಅಗತ್ಯವಿದೆ. ಮುಂದಿನ ಟಿ-20 ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ನೆರವಾಗಲು ದುಬೈನಲ್ಲೇ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಗೇಲ್ ಹೇಳಿದ್ದಾರೆ.
ವಿಶ್ರಾಂತಿಗೆ ಸಮಯ ನೀಡಿದ ಪಂಜಾಬ್‌ಗೆ ಧನ್ಯವಾದ:
ಐಪಿಎಲ್‌ನಿಂದ ಹೊರ ನಡೆದು ವಿಶ್ರಾಂತಿಗೆ ಸಮಯ ನೀಡಿದ ಪಂಜಾಬ್ ಕಿಂಗ್ಸ್‌ಗೆ ನನ್ನ ಧನ್ಯವಾದಗಳು. ಮುಂದಿನ ಎಲ್ಲಾ ಪಂದ್ಯಗಳಲ್ಲಿ ಅವರು ಉತ್ತಮವಾಗಿ ಆಡಳಿತ ಎಂದು ಗೇಲ್ ಹಾರೈಸಿದ್ದಾರೆ. ಮುಂದುವರಿದ 2ನೇ ಭಾಗದ ಐಪಿಎಲ್‌ನಲ್ಲಿ ಪಂಜಾಬ್ ಪರ 2 ಪಂದ್ಯಗಳನ್ನು ಆಡಿರುವ 42 ವರ್ಷದ ದೈತ್ಯ ಆಟಗಾರ ಕೇವಲ 15 ರನ್ ಗಳಿಸಿದ್ದಾರೆ. ಸಿಪಿಎಲ್ 2021 ಗೆದ್ದ ಬಳಿಕ ಅವರು ನೇರವಾಗಿ ಐಪಿಎಲ್ ಸೇರಿಕೊಂಡಿದ್ದರು. ಗೇಲ್ ಅವರ ನಿರ್ಧಾರವನ್ನು ಗೌರವಿಸುವುದಾಗಿ ಪಂಜಾಬ್ ತಂಡದ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.
ಸದ್ಯ 11 ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿರುವ ಪಂಜಾಬ್ ಕಿಂಗ್ಸ್‌ಗೆ 8 ಅಂಕಗಳನ್ನು ಪಡೆದಿದೆ. ಉಳಿದ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಅಂಕಿ ಅಂಶಗಳ ಆಧಾರದಲ್ಲಿ ಪ್ಲೇ ಆಫ್ ಆಸೆಯನ್ನು ಇನ್ನೂ ಜೀವಂತವಾಗಿಸಿಕೊಂಡಿದೆ.