ಸಿಡ್ನಿ: ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಹಲವಾರು ಕ್ರಿಕೆಟಿಗರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತೊರೆಯಲು ಮುಂದಾಗಿದ್ದಾರೆ.
ಆಸ್ಟ್ರೇಲಿಯಾದ ವೇಗದ ಬೌಲರ್ ಆಂಡ್ರ್ಯೂ ಟೈ ಅವರು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ರಾಜಸ್ಥಾನ್ ರಾಯಲ್ಸ್ ತಂಡ ತೊರೆದು ತವರಿಗೆ ಮರಳಿದ್ದಾರೆ. ಇತ್ತ ಐದು ದಿನದ ಹಿಂದೆ ರಾಜಸ್ಥಾನ್ ರಾಯಲ್ಸ್ ತಂಡದ ಇನ್ನೊಬ್ಬ ಆಟಗಾರ ಲಿಯಾಮ್ ಲಿವಿಂಗ್ಸ್ಟೋನ್ ಕೂಡ ತಂಡ ತೊರೆದಿದ್ದಾರೆ.
ಆಸ್ಟ್ರೇಲಿಯಾದ ಪ್ರಮುಖ ಮಾಧ್ಯಮದ ವರದಿ ಪ್ರಕಾರ, ಭಾರತಕ್ಕೆ ಬರುವ ಮತ್ತು ವಿದೇಶಿಗಳಿಗೆ ತೆರಳುವವರ ಸಂಖ್ಯೆ ಕಡಿಮೆ ಮಾಡಿದ್ದು, ಐಪಿಎಲ್ ಆಡುತ್ತಿರುವ ಆಸ್ಟ್ರೇಲಿಯಾದ ಅನೇಕ ಆಟಗಾರರು ಸುರಕ್ಷಿತವಾಗಿ ಮನೆಗೆ ಹಿಂದಿರುಗುವ ಬಗ್ಗೆ ಆಸ್ಟ್ರೇಲಿಯಾ ಸರ್ಕಾರ ಆತಂಕದಲ್ಲಿದೆ ಎಂದು ಹೇಳಿದೆ.
"ಭಾರತದಲ್ಲಿ ಕೊರೊನಾ ಹೆಚ್ಚುತ್ತಿದೆ. ಭಾರತದಿಂದ ಆಸ್ಟ್ರೇಲಿಯಾಕ್ಕೆ ಮರಳುವ ಜನರಿಗೆ ಇತ್ತೀಚಿಗೆ ಪ್ರಯಾಣ ನಿರ್ಬಂಧಗಳ ಮಧ್ಯೆ ಭಾರತದಲ್ಲಿರುವ ಅನೇಕ ಆಸ್ಟ್ರೇಲಿಯಾದ ಆಟಗಾರರು ಐಪಿಎಲ್ ಪಂದ್ಯಾವಳಿಯನ್ನು ಬೇಗನೆ ಬಿಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ನಾವು ಭಾರತದಲ್ಲಿ ಸುರಕ್ಷಿತವಾಗಿದ್ದೇವೆ. ದಿನಕ್ಕೆ ಎರಡು ಮೂರು ಭಾರಿ ನಮ್ಮನ್ನು ಪರೀಕ್ಷಿಸಲಾಗುತ್ತದೆ. ನಮ್ಮ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನಾವು ಖಂಡಿತವಾಗಿಯೂ ಆಸ್ಟ್ರೇಲಿಯಾಕ್ಕೆ ಮರಳಲಿದ್ದೇವೆ ಎಂದು ಕೋಲ್ಕತಾ ನೈಟ್ ರೈಡರ್ಸ್ ಮಾರ್ಗದರ್ಶಕ ಡೇವಿಡ್ ಹಸ್ಸಿ ಹೇಳಿದ್ದಾರೆ.
ಐಪಿಎಲ್‌ನಲ್ಲಿ 17 ಆಸೀಸ್ ಆಟಗಾರರು ಭಾಗಿಯಾಗಿದ್ದಾರೆ. ಇದರಲ್ಲಿ ಈಗಾಗಲೇ ಆಂಡ್ರ್ಯೂ ಟೈ ತವರಿಗೆ ಮರಳಿದ್ದು, ಇನ್ನೂ 16 ಆಟಗಾರರು ಐಪಿಎಲ್‌ನಲ್ಲಿ ಭಾಗಿಯಾಗಿದ್ದಾರೆ.
ಜೋಶ್ ಹ್ಯಾಜಲ್‌ವುಡ್ (ಚೆನ್ನೈ ಸೂಪರ್ ಕಿಂಗ್ಸ್), ಮಿಚ್ ಮಾರ್ಷ್ (ಸನ್‌ರೈಸರ್ಸ್ ಹೈದರಾಬಾದ್) ಮತ್ತು ಜೋಶ್ ಫಿಲಿಪ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಪಂದ್ಯಾವಳಿ ಪ್ರಾರಂಭವಾಗುವ ಮೊದಲೇ ಐಪಿಎಲ್‌ನಿಂದ ಹಿಂದೆ ಸರಿದಿದ್ದರು.
ಇದನ್ನೂ ಓದಿ : ಕುಟುಂಬ ಸದಸ್ಯರಿಗೆ ಕೋವಿಡ್: IPLನಿಂದ ಹೊರನಡೆದ ಆರ್.ಅಶ್ವಿನ್