ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನ(ಐಪಿಎಲ್) 15ನೇ ಆವೃತ್ತಿಗೋಸ್ಕರ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳಿಗೆ ಫ್ರಾಂಚೈಸಿಗಳು ಮಣೆ ಹಾಕಿವೆ. ಇದೇ ಸಾಲಿಗೆ ಕನ್ನಡಿಗ ಅಭಿನವ್ ಮನೋಹರ್ ಸೇರ್ಪಡೆಯಾಗಿದ್ದಾರೆ.
20 ಲಕ್ಷ ರೂ ಮೂಲ ಬೆಲೆ ಹೊಂದಿದ್ದ ಈ ಆಟಗಾರ ಮೊದಲ ದಿನ ನಡೆದ ಹರಾಜಿನಲ್ಲಿ ದಾಖಲೆಯ 2.60 ಕೋಟಿ ರೂ.ಗೆ ಗುಜರಾತ್ ಟೈಟನ್ಸ್ ಪಾಲಾದರು. ಕಳೆದ ನವೆಂಬರ್ ತಿಂಗಳಲ್ಲಿ ಸೈಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ ಸೌರಾಷ್ಟ್ರ ವಿರುದ್ಧ ಡೆಬ್ಯು ಮಾಡಿದ್ದ ಮನೋಹರ್ ಮೊದಲ ಪಂದ್ಯದಲ್ಲಿ 49 ಎಸೆತಗಳಲ್ಲಿ 70 ರನ್ ಗಳಿಸಿ ಗಮನ ಸೆಳೆದಿದ್ದರು.
ಯಾರಿದು ಅಭಿನವ್ ಮನೋಹರ್? 20 ವರ್ಷಗಳ ಹಿಂದಿನ ಕಥೆ. ಬೆಂಗಳೂರಿನಲ್ಲಿ ಪಾದರಕ್ಷೆ ಅಂಗಡಿ ಇಟ್ಟುಕೊಂಡಿದ್ದ ಮನೋಹರ್ ಸದಾರಂಗನಿ (ಅಭಿನವ್ ಮನೋಹರ್ ಅವರ ತಂದೆ) ತನ್ನ ಆರು ವರ್ಷದ ಪುತ್ರನನ್ನು ಕ್ರಿಕೆಟ್ ಅಕಾಡೆಮಿಗೆ ಸೇರಿಸಲು ಬಂದಿದ್ದರು. ಅಕಾಡೆಮಿಗೆ ಬಂದಾಗ ಬೌಲರ್ಗಳನ್ನು ಎದುರಿಸಲು ಹೆದರುತ್ತಿದ್ದ ಬಾಲಕ ಮನೋಹರ್, ಕ್ರಿಕೆಟ್‌ನಲ್ಲಿ ಅಷ್ಟೊಂದು ಆಸಕ್ತಿಯನ್ನೇನೂ ಹೊಂದಿರಲಿಲ್ಲ. ಹೀಗಾಗಿ, ಶಾಲಾ ಚಟುವಟಿಕೆಗಳು ಮುಗಿದ ನಂತರ ಅಕಾಡೆಮಿಗೆ ಬಂದು, ಕೆಲ ಹೊತ್ತು ಕಳೆದು ಮನೆಗೆ ವಾಪಸ್ ಆಗುತ್ತಿದ್ದನು.
ಆದರೆ, 2006ರಲ್ಲಿ ಎಲ್ಲವೂ ಬದಲಾಯಿತು. ಅಭಿನವ್ ಮನೋಹರ್ ತರಬೇತಿ ಪಡೆದುಕೊಳ್ಳುತ್ತಿದ್ದ ಅಕಾಡೆಮಿ ಹೈದರಾಬಾದ್ ಅಂಡರ್-14 ತಂಡದ ವಿರುದ್ಧ ಅಭ್ಯಾಸ ಪಂದ್ಯ ಆಡಿತು. ಈ ಸಂದರ್ಭದಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿದಿದ್ದಾಗ ಚೆಂಡು ಮನೋಹರ್ ಹಣೆಗೆ ಬಡಿದು ರಕ್ತಸ್ರಾವವಾಗಿತ್ತು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಮರುದಿನ ಕ್ರಿಕೆಟ್ ಮೈದಾನಕ್ಕೆ ಬಂದಿದ್ದ ಮನೋಹರ್ ಆಕರ್ಷಕ ಶತಕ ಸಿಡಿಸಿ ನೋವು ಮರೆತಿದ್ದರು. ಈ 'ಮನೋಹರ' ಆಟ ಯುವ ಕ್ರಿಕೆಟಿಗನ ಬದುಕಿಗೆ ಮಹತ್ವದ ತಿರುವು ಕೊಟ್ಟಿತು ಎಂದು ಅವರ ಬಾಲ್ಯದ ಕೋಚ್ ಇರ್ಫಾನ್ ಹೇಳುತ್ತಾರೆ.
ಜೂನಿಯರ್ ಮಟ್ಟದ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಮನೋಹರ್ ಈಗಾಗಲೇ ಮಿಂಚು ಹರಿಸಿದ್ದಾರೆ. ಆದರೆ, ಕೆ.ಎಲ್.ರಾಹುಲ್, ಮಯಾಂಕ್ ಅಗರ್‌ವಾಲ್, ಕರುಣ್ ನಾಯರ್ ಮತ್ತು ಮನೀಶ್ ಪಾಂಡೆಯಂಥ ಆಟಗಾರರ ರೀತಿ ಭಾರತ ತಂಡವನ್ನು ಪ್ರತಿನಿಧಿಸಲು ಇವರಿಗೆ ಸಾಧ್ಯವಾಗಿಲ್ಲ.
ಇದನ್ನೂ ಓದಿ: ₹10 ಕೋಟಿಗೆ ಸೇಲ್... ಮೂಲ ಬೆಲೆಗಿಂತಲೂ 10 ಪಟ್ಟು ಅಧಿಕ ಪಡೆದ ಕನ್ನಡಿಗ ಪ್ರಸಿಧ್ ಕೃಷ್ಣ
ಕರ್ನಾಟಕ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿರುವ ಅಭಿನವ್ ಇದೀಗ ಐಪಿಎಲ್ನಲ್ಲಿ ಕೋಟಿ ಮೊತ್ತಕ್ಕೆ ಬಿಕರಿಯಾಗಿದ್ದಾರೆ. 27 ವರ್ಷದ ಕನ್ನಡಿಗನನ್ನು ಖರೀದಿಸಲು ಕೋಲ್ಕತ್ತಾ ಹಾಗೂ ಡೆಲ್ಲಿ ತಂಡಗಳು ಸಹ ಪೈಪೋಟಿ ನಡೆಸಿದ್ದವು.
ಗುಜರಾತ್ ತಂಡಕ್ಕೆ ಈಗಾಗಲೇ ಹಾರ್ದಿಕ್ ಪಾಂಡ್ಯ ನಾಯಕನಾಗಿದ್ದು ರಶೀದ್ ಖಾನ್, ಶುಭಮನ್ ಗಿಲ್ ಅವರು ತಂಡದಲ್ಲಿದ್ದಾರೆ. ಜೊತೆಗೆ, ಲಾಕಿ ಫರ್ಗುಸನ್ (10 ಕೋಟಿ), ಜೇಸನ್ ರಾಯ್ (2 ಕೋಟಿ), ಮೊಹಮ್ಮದ್ ಶಮಿ (6.25 ಕೋಟಿ) ಅವರನ್ನು ಆಯ್ಕೆ ಮಾಡಿಕೊಂಡಿದೆ.