ಸೂರತ್: '7 ನನ್ನ ಹೃದಯಕ್ಕೆ ಹತ್ತಿರವಾದ ಸಂಖ್ಯೆ. ಏಕೆಂದರೆ ನಾನು 7ನೇ ತಿಂಗಳ 7ನೇ ದಿನಾಂಕದಂದು ಜನಿಸಿದ್ದೇನೆ. ಅದಕ್ಕಾಗಿ ನನ್ನ ಜರ್ಸಿಯಲ್ಲಿ ಅದೇ ನಂಬರ್ ಇದೆ. 7 ನನ್ನ ಅದೃಷ್ಟ ಸಂಖ್ಯೆ ಎನ್ನುವುದೆಲ್ಲ ಸುಳ್ಳು. ನಾನು ಆ ರೀತಿಯ ಯಾವುದೇ ಮೂಢನಂಬಿಕೆಯನ್ನು ಹೊಂದಿಲ್ಲ' ಎಂದು ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಎಂ.ಎಸ್.ಧೋನಿ 7 ಸಂಖ್ಯೆಯನ್ನು ತಮ್ಮ ಜರ್ಸಿ ನಂಬರ್ ಆಗಿ ಬಳಸುತ್ತಿದ್ದಾರೆ. ಇಂಡಿಯಾ ಸಿಮೆಂಟ್ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ, 7ನ್ನು ಜರ್ಸಿ ನಂಬರ್ ಆಗಿ ಬಳಸುತ್ತಿರುವ ಹಿನ್ನೆಲೆಯನ್ನು ಅವರು ವಿವರಿಸಿದರು.
ಆರಂಭದಲ್ಲಿ ತುಂಬಾ ಜನ 7 ನನ್ನ ಅದೃಷ್ಟ ಸಂಖ್ಯೆ ಎಂದೇ ಭಾವಿಸಿದ್ದರು. ಅದು ನಾನು ಹುಟ್ಟಿದ 7ನೇ ತಿಂಗಳ 7ನೇ ದಿನವಷ್ಟೇ. ನನ್ನ ಜನ್ಮದಿನಾಂಕವನ್ನು ಜರ್ಸಿ ನಂಬರ್ ಆಗಿ ಬಳಸಿಕೊಂಡಿದ್ದೇನೆಯೇ ಹೊರತು, ಅದು ಒಳ್ಳೆಯ ನಂಬರ್ ಅಥವಾ ಅದೃಷ್ಟದ ನಂಬರ್ ಎಂದಲ್ಲ ಎಂದು ಧೋನಿ ಸ್ಪಷ್ಟಪಡಿಸಿದರು.
ಕೆಲವು ಜನರು ಮತ್ತೆ ಇದರ ಬಗ್ಗೆ ಕೇಳುತ್ತಲೇ ಇರುತ್ತಾರೆ. ಹಾಗಾಗಿ ನಾನು ಜನ್ಮದಿನಾಂಕ ಮತ್ತು ತಿಂಗಳು ಎಂದು ಹೇಳುವುದರ ಜೊತೆಗೆ ಕೆಲವೊಮ್ಮೆ 81 ನಾನು ಹುಟ್ಟಿದ ವರ್ಷ. ಅಷ್ಟೇ ಅಲ್ಲ, 8-1=7 ಎಂದು ಹೆಚ್ಚಿಗೆ ಸೇರಿಸಿ ಹೇಳುತ್ತೇನೆ ಎಂದು ಸಿಎಸ್ಕೆ ನಾಯಕ ಹೇಳಿದರು.
ಐಪಿಎಲ್ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೆ ಸೂರತ್ನಲ್ಲಿ ಅಭ್ಯಾಸ ಆರಂಭಿಸಿದೆ. ಮಾರ್ಚ್ 26ರಂದು ವಾಂಖೆಡೆಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಕಣಕ್ಕಿಳಿಯಲಿದೆ.
ಇದನ್ನೂ ಓದಿ:ನಾಯಕತ್ವ ತ್ಯಜಿಸಿ ಒತ್ತಡಮುಕ್ತ ಕೊಹ್ಲಿ ಎದುರಾಳಿಗಳಿಗೆ ಅಪಾಯಕಾರಿ: ಮ್ಯಾಕ್ಸ್ವೆಲ್