ಪುಣೆ: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಕೆಕೆಆರ್ ತಂಡದ ಪ್ಯಾಟ್ ಕಮಿನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆಯನ್ನು ಕನ್ನಡಿಗ ಕೆ.ಎಲ್.ರಾಹುಲ್ ಜೊತೆಗೆ ಹಂಚಿಕೊಂಡಿದ್ದಾರೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದಿದ್ದ ಪಂದ್ಯದಲ್ಲಿ ಕಮಿನ್ಸ್ ತಾವು ಎದುರಿಸಿದ 14 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿಸಹಿತ ಅಜೇಯ 56 ರನ್ಗಳಿಸುವ ಮೂಲಕ ರಾಹುಲ್ ದಾಖಲೆಯನ್ನು ಸರಿಗಟ್ಟಿದರು.
2018ರ ಆವೃತ್ತಿಯಲ್ಲಿ ಪಂಜಾಬ್ ತಂಡದಲ್ಲಿ ಆಡಿದ್ದ ಕೆ.ಎಲ್.ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ಎಸೆತಗಳಲ್ಲಿ 50 ರನ್ ಸಿಡಿಸಿ ಐಪಿಎಲ್ನ ವೇಗದ ಅರ್ಧಶತಕ ದಾಖಲೆಗೆ ಪಾತ್ರರಾಗಿದ್ದರು. ಇವರಿಬ್ಬರನ್ನು ಹೊರತುಪಡಿಸಿದರೆ, ಕೆಕೆಆರ್ ತಂಡದ ಸುನಿಲ್ ನರೇನ್ ಮತ್ತು ಯೂಸುಫ್ ಪಠಾಣ್ ತಲಾ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ವಿಶೇಷವೆಂದರೆ ಪ್ಯಾಟ್ ಕಮಿನ್ಸ್ ಐಪಿಎಲ್ನಲ್ಲಿ 3 ಅರ್ಧಶತಕ ಸಿಡಿಸಿದ್ದು, ಅದರಲ್ಲಿ ಎರಡೂ ಮುಂಬೈ ವಿರುದ್ಧವೇ ಬಂದಿವೆ.
ಆಸ್ಟ್ರೇಲಿಯಾ ಪರ ವೇಗದ ಅರ್ಧಶತಕ: ಪ್ಯಾಟ್ ಕಮಿನ್ಸ್ ಅತಿ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಆಸಿಸ್ ಬ್ಯಾಟರ್ ಎನಿಸಿಕೊಂಡರು. 2020ರ ಬಿಬಿಎಲ್ನಲ್ಲಿ ಸಿಡ್ನಿ ಸಿಕ್ಸರ್ ಪರ ಆಡುವಾಗ ಡೇನಿಯಲ್ ಕ್ರಿಶ್ಚಿಯನ್ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.
ಆಡಿದ 15 ಎಸೆತಗಳಲ್ಲಿ ಹೆಚ್ಚು ರನ್: ಪಂದ್ಯದಲ್ಲಿ 15 ಎಸೆತಗಳನ್ನು ಎದುರಿಸಿ ಅತಿ ಹೆಚ್ಚು ರನ್ಗಳಿಸಿದ ಬ್ಯಾಟರ್ ಎನಿಸಿಕೊಂಡರು. ಅವರು 15 ಎಸೆತಗಳಲ್ಲಿ ಅಜೇಯ 56 ರನ್ಗಳಿಸಿದ್ದರು, 2015ರಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ 15 ಎಸೆತಗಳಲ್ಲಿ 42 ರನ್ಗಳಿಸಿದ ದಾಖಲೆ ಹೊಂದಿದ್ದಾರೆ.
ಇದನ್ನೂ ಓದಿ:ಅಯ್ಯರ್-ಕಮಿನ್ಸ್ ಭರ್ಜರಿ ಆಟ.. ಮುಂಬೈ ಇಂಡಿಯನ್ಸ್ಗೆ ಸತತ 3ನೇ ಸೋಲು