ಅಬುಧಾಬಿ: ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲೂ ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ನಮ್ಮನ್ನು ಮೀರಿಸಿದರು ಎಂದು ಡೆಲ್ಲಿ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ 13 ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಸೋತ ನಂತರ ಮಾತನಾಡಿದ ಶ್ರೇಯಸ್ ಅಯ್ಯರ್, 162 ರನ್ಗಳ ಗುರಿ ನೋಡಿ ನಾವು ಸಂತಸ ಪಟ್ಟಿದ್ದೆವು, ಈ ಮೈದಾನದಲದಲ್ಲಿ ನಮ್ಮ ಮೊದಲನೇ ಪಂದ್ಯವಾದ್ದರಿಂದ ಇಲ್ಲಿನ ಪಿಚ್ ಹೇಗೆ ವರ್ತಿಸುತ್ತದೆ ಎಂದು ತಿಳಿದಿರಲಿಲ್ಲ. ಅವರು ನಮ್ಮನ್ನು ಮೂರು ವಿಭಾಗಗಳಲ್ಲಿ ಮೀರಿಸಿದರು ಅದಕ್ಕಾಗಿ ಅವರಿಗೆ ಯಶಸ್ಸು ದೊರೆಯಿತು ಎಂದಿದ್ದಾರೆ.
ಎರಡನೇ ಇನ್ನಿಂಗ್ಸ್ ವೇಳೆ ಪಿಚ್ ಎರಡು ರೀತಿಯಲ್ಲಿ ವರ್ತಿಸಿತು. ಮೊದಲು ಚೆಂಡು ಬ್ಯಾಟ್ನತ್ತ ಬರುತ್ತಿರಲಿಲ್ಲ. ನಂತರ ಇಬ್ಬನಿ ಬರಲಿದೆ ಎಂದು ನಾವು ಯೋಚಿಸಿದ್ದೆವು. ಆದರೆ ಈ ಸಂದರ್ಭದಲ್ಲಿ ಯಾವುದೇ ಕಾರಣ ನೀಡುವುದಿಲ್ಲ ಎಂದಿದ್ದಾರೆ.
ಮೈದಾನವು ತುಂಬಾ ದೊಡ್ಡದಾಗಿದೆ, ನಾವು ಹೆಚ್ಚಾಗಿ ಎರಡು ರನ್ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಇಲ್ಲಿ ಬೌಂಡರಿಗಳೂ ದೊಡ್ಡದಾಗಿವೆ ಹೀಗಾಗಿ ಡಬಲ್ಸ್ ನಮಗೆ ಪ್ರಮುಖವಾದುದು ಎಂದು ತಿಳಿದಿತ್ತು. ಮುಂದಿನ ಪಂದ್ಯದಲ್ಲಿ ನಾವು ಉತ್ತಮವಾಗಿ ಕಂಬ್ಯಾಕ್ ಮಾಡುತ್ತೇವೆ ಎಂದಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು. ಮರುತ್ತರವಾಗಿ ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕಂಡು 147 ರನ್ ಗಳಿಸಿ 15 ರನ್ಗಳಿಂದ ವಾರ್ನರ್ ಪಡೆಗೆ ಶರಣಾಯಿತು.