ಅಬುಧಾಬಿ: ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ವಿರಾಟ್ ನಾಯಕತ್ವದ ಆರ್ಸಿಬಿ ತಂಡವನ್ನು ವಾರ್ನರ್ ಪಡೆ 6 ವಿಕೆಟ್ಗಳ ಅಂತರದಿಂದ ಸೋಲಿಸಿದೆ. ಈ ಮೂಲಕ ಪ್ರಸಕ್ತ ಐಪಿಎಲ್ನಲ್ಲಿ ಆರ್ಸಿಬಿಯ ಆಟ ಕೊನೆಯಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಎದುರಾಳಿ ತಂಡಕ್ಕೆ 132 ರನ್ಗಳ ಸಾಧಾರಣ ಗುರಿ ನೀಡಿತ್ತು. ಹೈದರಾಬಾದ್ ತಂಡ 19.4 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ದೇವದತ್ ಪಡಿಕ್ಕಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಪಡಿಕ್ಕಲ್ ಕೂಡ ಕೇವಲ 1 ರನ್ ಗಳಿಸಿ ಜೇಸನ್ ಹೋಲ್ಡರ್ಗೆ ವಿಕೆಟ್ ಒಪ್ಪಿಸಿದರು. ಪವರ್ ಫ್ಲೇ ಮುಕ್ತಾಯದ ವೇಳೆಗೆ ಆರ್ಸಿಬಿ 2 ವಿಕೆಟ್ ಕಳೆದುಕೊಂಡು ಕೇವಲ 32 ರನ್ ಗಳಿಕೆ ಮಾಡಿತ್ತು. ಬಳಿಕ ಒಂದಾದ ಫಿಂಚ್ ಹಾಗೂ ಡಿವಿಲಿಯರ್ಸ್ ತಂಡಕ್ಕೆ ಚೇತರಿಕೆ ನೀಡುವ ಯತ್ನ ಮಾಡಿದ್ದರಿಂದ 10 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 54 ರನ್ ಗಳಿಸಿತ್ತು. ಆದರೆ 32 ರನ್ ಬಾರಿಸಿದ್ದ ಫಿಂಚ್ ನದೀಂ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮೊಯಿನ್ ಅಲಿ ರನೌಟ್ ಬಲೆಗೆ ಬಿದ್ದರೆ, ಶಿವಂ ದುಬೆ 5 ರನ್ ಗಳಿಕೆ ಮಾಡಿದ್ದ ವೇಳೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಬಳಿಕ ಬಂದ ವಾಷಿಂಗ್ಟನ್ ಸುಂದರ್ 5 ರನ್ ಗಳಿಸಿ ಕ್ಯಾಚ್ ನೀಡಿದರು. 56 ರನ್ ಬಾರಿಸಿ ಉತ್ತಮವಾಗಿ ಆಡುತ್ತಿದ್ದ ಎಬಿಡಿ, ನಟರಾಜನ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದ್ದರು. ಕೊನೆಯದಾಗಿ ಸಿರಾಜ್ ಅಜೇಯ 10 ರನ್ ಹಾಗೂ ಸೈನಿ 9 ರನ್ ಗಳಿಸಿದರು. ಅಂತಿಮವಾಗಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿದ ಆರ್ಸಿಬಿ, ಹೈದರಾಬಾದ್ಗೆ 13 2ರನ್ಗಳ ಗೆಲುವಿನ ಗುರಿ ನೀಡಿತ್ತು. ಹೈದರಾಬಾದ್ ತಂಡದ ಪರ ಹೋಲ್ಡರ್ 3 ವಿಕೆಟ್, ನಟರಾಜನ್ 2 ಹಾಗೂ ನದೀಂ 1 ವಿಕೆಟ್ ಪಡೆದುಕೊಂಡರು.
ಟಾರ್ಗೆಟ್ ಬೆನ್ನತ್ತಿದ್ದ ಹೈದರಾಬಾದ್ ಕೂಡ ಆರಂಭಿಕ ಆಘಾತ ಅನುಭವಿಸಿತು. ಶ್ರೀವತ್ಸ್ ಗೋಸ್ವಾಮಿ ಸೊನ್ನೆ ಸುತ್ತಿದರು. ಬಳಿಕ ವಾರ್ನರ್ ಜೊತೆಯಾದ ಮನೀಷ್ ಪಾಂಡೆ ತಂಡದ ಮೊತ್ತವನ್ನು ನಿಧಾನವಾಗಿ ಏರಿಸಿದರು. ವಾರ್ನರ್ 17 ರನ್ ಗಳಿಸಿದ್ದಾಗ ಸಿರಾಜ್ ಬೌಲಿಂಗ್ನಲ್ಲಿ ಕ್ಯಾಚಿತ್ತರು. ಈ ಬೆನ್ನಲ್ಲೇ ಪಾಂಡೆ 24 ರನ್ ಗಳಿಸಿದ್ದಾಗ ಜಂಪಾ ಬೌಲಿಂಗ್ನಲ್ಲಿ ಔಟಾದರು. 55 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದ ಹೈದರಾಬಾದ್ ತಂಡಕ್ಕೆ ಆಸರೆಯಾದ ಕೇನ್ ವಿಲಿಯಮ್ಸನ್ ಅಜೇಯ 50 ರನ್ ಪೇರಿಸಿ, ಗೆಲುವಿನ ದಡ ಸೇರಿಸಿದರು. ಜಾಸನ್ ಹೋಲ್ಡರ್ 24 ರನ್ ಪೇರಿಸಿ ಕೇನ್ಗೆ ಉತ್ತಮ ಸಾಥ್ ನೀಡಿದರು.
ಅರ್ಧ ಶತಕ ಸಿಡಿಸಿದ ವಿಲಿಯಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.