ದುಬೈ: ಇಂದು ನಡೆಯಲಿರುವ ಐಪಿಎಲ್ನ 40ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಉಭಯ ತಂಡಗಳೂ ಗೆಲ್ಲಲೇಬೇಕಾದ ಒತ್ತಡದಲ್ಲಿವೆ.
ಹೈದರಾಬಾದ್ ತಂಡ ಇಲ್ಲಿಯವರೆಗೆ ಒಟ್ಟು ಒಂಭತ್ತು ಪಂದ್ಯಗಳನ್ನಾಡಿದ್ದು, 3 ಪಂದ್ಯಗಳಲ್ಲಿ ಗೆಲುವು ಕಂಡಿದ್ರೆ, ಆರು ಪಂದ್ಯಗಳಲ್ಲಿ ಸೋತಿದೆ. ಇತ್ತ ರಾಜಸ್ಥಾನ ತಂಡ ಆಡಿರುವ 10 ಪಂದ್ಯಗಳ ಪೈಕಿ 4 ಪಂದ್ಯ ಜಯಿಸಿದ್ರೆ, 6ರಲ್ಲಿ ಸೋಲು ಕಂಡಿದೆ.
ರಾಜಸ್ಥಾನ ತಂಡಕ್ಕೆ ಬ್ಯಾಟಿಂಗ್ನದ್ದೇ ಚಿಂತೆಯಾಗಿದೆ. ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಸ್ಟೋಕ್ಸ್ ಮತ್ತು ಉತ್ತಪ್ಪ ಉತ್ತಮ ಆರಂಭ ಒದಗಿಸುತ್ತಿಲ್ಲ. ಇತ್ತ ಸಾಮ್ಸನ್ ಪೈಫಲ್ಯ ದೊಡ್ಡ ಹಿನ್ನಡೆಯಾಗಿದೆ. ನಾಯಕ ಸ್ಟೀವ್ ಸ್ಮಿತ್ ಮತ್ತು ಬಟ್ಲರ್ ಲಯದಲ್ಲಿರುವುದು ಕೊಂಚ ನೆಮ್ಮದಿ ತರಿಸಿದೆ.
ಬೌಲಿಂಗ್ನಲ್ಲಿ ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ರಾಹುಲ್ ತೆವಾಟಿಯಾ, ಕಾರ್ತಿಕ್ ತ್ಯಾಗಿ ಉತ್ತಮವಾಗಿ ಸ್ಪೆಲ್ ಮಾಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಸಿಎಸ್ಕೆ ಆಟಗಾರರನ್ನು ಕೇವಲ 125 ರನ್ಗಳಿಗೆ ಕಟ್ಟಿಹಾಕಿದ್ದರು.
ಸನ್ ರೈಸರ್ಸ್ ಹೈದರಾಬಾದ್ ಕೂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಮತೋಲನದಿಂದ ಕೂಡಿದೆ. ಆದರೆ ಟಾಪ್ ಆರ್ಡರ್ ಬ್ಯಾಟ್ಸಮನ್ಗಳು ಆರ್ಭಟಿಸಿದಾಗ ಮಾತ್ರ ದೊಡ್ಡ ಮಟ್ಟದ ರನ್ ಕಲೆಹಾಕಬಹುದಾಗಿದೆ. ತಂಡಕ್ಕೆ ವಾರ್ನರ್, ಬೈರ್ ಸ್ಟೋವ್, ಮನೀಷ್ ಪಾಂಡೆ ಹಾಗೂ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಆಧಾರ ಸ್ತಭವಾಗಿದ್ದಾರೆ.
ಬೌಲಿಂಗ್ನಲ್ಲಿ ಟಿ.ನಟರಾಜನ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ ಹಾಗೂ ರಶೀದ್ ಖಾನ್ ಟ್ರಂಪ್ ಕಾರ್ಡ್ ಆಗಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯ ಟೈ ಆದ ಕಾರಣ ನಡೆಸಿದ ಸೂಪರ್ ಓವರ್ನಲ್ಲಿ ಹೈದರಾಬಾದ್ ಸೋಲು ಕಂಡಿತ್ತು.
ಉಭಯ ತಂಡಗಳು ಇಲ್ಲಿಯವರೆಗೆ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 6 ಪಂದ್ಯಗಳಲ್ಲಿ ಹೈದರಾಬಾದ್ ತಂಡ ಗೆಲುವು ಕಂಡಿದ್ರೆ, 6 ಪಂದ್ಯಗಳಲ್ಲಿ ರಾಜಸ್ಥಾನ ತಂಡ ಜಯ ಸಾಧಿಸಿದೆ.