ಮುಂಬೈ: ಇದೇ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಫೈನಲ್ ಪ್ರವೇಶಿಸಿದ ದೆಹಲಿ ಕ್ಯಾಪಿಟಲ್ಸ್ (ಡಿಸಿ) ತಂಡಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಇಂದು (ನ. 10) ರಾತ್ರಿ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಮಧ್ಯೆ ಟ್ರೋಫಿಗಾಗಿ ಸೆಣಸಾಟ ನಡೆಯಲಿದೆ. ಈ ಹಿನ್ನೆಲೆ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅರ್ಹತೆ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ. ಅಲ್ಲದೇ ಬಲಿಷ್ಟ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಲು ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಶಿಖರ್ ಧವನ್ ಹಾಗೂ ಸ್ಪಿನ್ ಮಾಂತ್ರಿಕ ಆರ್.ಅಶ್ವಿನ್ ಅವರನ್ನು ಮೊದಲು ಕೈಬಿಟ್ಟಿತಾದರೂ ತದನಂತರ ತಂಡಕ್ಕೆ ಸೇರಿಸಿಕೊಂಡಿತು. ಇದು ತಂಡಕ್ಕೆ ಪಲ್ಸ್ ಪಾಯಿಂಟ್ ಆಗುವ ಸಾಧ್ಯತೆ ಹೆಚ್ಚು. ಟೂರ್ನಿಯಲ್ಲಿ ಈ ಇಬ್ಬರೂ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ತಂಡದ ಆಟಗಾರರ ಪ್ರತಿಭೆಯ ಮೇಲೆ ವಿಶ್ವಾಸವಿಡಬೇಕು. ಇಂದು ರಾತ್ರಿ ನಡೆಯುವ ಪಂದ್ಯ ಏನಾದರೂ ಆಗಲಿ, ಅವರು ತಮ್ಮ ತಂಡದ ಆಟಗಾರರ ಮೇಲಿನ ವಿಶ್ವಾಸ ಕಳೆದುಕೊಳ್ಳಬಾರದು. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಅದೊಂದು ಸಮತೋಲಿತ ತಂಡವಾಗಿದೆ ಎಂದಿದ್ದಾರೆ ಬಾಂಗರ್.
ಮುಂಬೈ ವಿರುದ್ಧ ಇಂದು ರಾತ್ರಿ 7 ಗಂಟೆಗೆ ಪಂದ್ಯ ಪ್ರಾರಂಭವಾಗಲಿದ್ದು ಡೆಲ್ಲಿ ಪರ ಶ್ರೇಯಾಸ್ ಅಯ್ಯರ್ ನೇತೃತ್ವದ ತಂಡದಲ್ಲಿ, ಶಿಖರ್ ಧವನ್, ಮಾರ್ಕಸ್ ಸ್ಟೋಯ್ನಿಸ್, ಆರ್. ಅಶ್ವಿನ್, ಕಗಿಸೊ ರಬಾಡಾ, ಅಕ್ಸರ್ ಪಟೇಲ್, ಅನ್ರಿಚ್ ನಾರ್ಟ್ಜೆ ಅವರುಗಳು ಪ್ರಮುಖ ಆಟಗಾರರಾಗಿದ್ದಾರೆ. ಮುಖ್ಯ ತರಬೇತುದಾರ ರಿಕಿ ಪಾಂಟಿಂಗ್ ಅವರ ಮಾರ್ಗದರ್ಶನದಲ್ಲಿ ಕಳೆದ ಎರಡು ವರ್ಷಗಳಿಂದ ಈ ತಂಡವು ಉತ್ತಮ ಪ್ರದರ್ಶನ ನೀಡಿದೆ.
ರೋಹಿತ್ ಶರ್ಮಾ ನೇತೃತ್ವದ ಮುಂಬೈ ತಂಡ ಈಗಾಗಲೇ ನಾಲ್ಕು ಬಾರಿ ಚಾಂಪಿಯನ್ ಪಟ್ಟ ಗೆದ್ದಿದೆ. ಆದರೆ, ಡೆಲ್ಲಿ ಇದೇ ಮೊದಲ ಬಾಲಿಗೆ ಐಪಿಎಲ್ ಫೈನಲ್ ಪ್ರವೇಶ ಮಾಡಿದೆ. ಹಾಗಾಗಿಯೇ ಡೆಲ್ಲಿಗೆ ಈ ಪಂದ್ಯ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.