ಶಾರ್ಜಾ: ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಸಂಜು ಸ್ಯಾಮ್ಸನ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಸ್ಯಾಮ್ಸನ್, ರಾಯಲ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ತಮ್ಮ ಅದ್ಭುತ ಫಾರ್ಮ್ ಬಗ್ಗೆ ಮಾತನಾಡಿರುವ ಸ್ಯಾಮ್ಸನ್, ಕಳೆದ ಒಂದು ವರ್ಷದಿಂದ ನಾನು ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ. ಹಾಗಾಗಿ ನಾನು ನನ್ನ ಎಂದಿನ ಆಟದ ಶೈಲಿಗೆ ಅಂಟಿಕೊಂಡಿದ್ದು, ಉತ್ತಮ ಪ್ರದರ್ಶನ ನೀಡುವ ಆತ್ಮವಿಶ್ವಾಸ ಹೊಂದಿದ್ದೇನೆ. ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.
ನಾನು ಏನು ಸಾಧಿಸಬೇಕೆಂದು ನಾನ್ನನ್ನೇ ಕೇಳಿಕೊಂಡೆ? ನನ್ನಲ್ಲಿ ಈ ಅದ್ಭುತ ಆಟ ಇನ್ನೂ 10 ವರ್ಷ ಇರಲಿದೆ ಮತ್ತು ಈ 10 ವರ್ಷಗಳಲ್ಲಿ ನನ್ನ ಕೈಲಾದಷ್ಟು ಉತ್ತಮ ಪ್ರದರ್ಶನ ನೀಡುತ್ತೇನೆ ಎಂದಿದ್ದಾರೆ.
ಇನ್ನು ತಮ್ಮ ಪವರ್ ಹಿಟ್ಟಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಯಾಮ್ಸನ್, ಶಕ್ತಿ ನನ್ನ ತಂದೆಯಿಂದಲೇ ಬಂದಿದೆ. ನನ್ನ ಅಪ್ಪ ಓರ್ವ ಪವರ್ಫುಲ್ ಮ್ಯಾನ್ ಎಂದಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಸ್ಯಾಮ್ಸನ್ 45 ಎಸೆತಗಳಲ್ಲಿ 7 ಸಿಕ್ಸರ್, 4 ಬೌಂಡರಿ ಸಹಿತ 85 ರನ್ ಸಿಡಿಸಿದರು. ಚೆನ್ನೈ ವಿರುದ್ಧದ ಪಂದ್ಯದಲ್ಲಿ 74 ರನ್ ಸಿಡಿಸಿದ್ದ ಸ್ಯಾಮ್ಸನ್ ಎರಡು ಪಂದ್ಯಗಳಿಂದ ಒಟ್ಟು 159 ರನ್ ಗಳಿಸಿದ್ದಾರೆ.