ದುಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಕನ್ನಡಿಗರಿಂದಲೇ ತುಂಬಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.
ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಗೆಲುವಿನ ಹುಮ್ಮಸ್ಸಿನಲ್ಲಿದೆ. ಇತ್ತ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೂಪರ್ ಓವರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲುಕಂಡಿದ್ದು, ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಇಲ್ಲಿಯವರೆಗೂ 24 ಬಾರಿ ಮುಖಾಮುಖಿಯಾಗಿರುವ ಉಭಯ ತಂಡಗಳು ತಲಾ 12 ಪಂದ್ಯದಲ್ಲಿ ಗೆಲುವು ಸಾಧಿಸಿವೆ.
ನಾಯಕ ವಿರಾಟ್ ಕೊಹ್ಲಿ ಕಡಿಮೆ ರನ್ ಸಿಡಿಸಿದ್ದರು, ಪಡಿಕ್ಕಲ್, ಎಬಿಡಿ ಮತ್ತು ಫಿಂಚ್ ಅವರ ನೆರವಿನಿಂದ ಆರ್ಸಿಬಿ ಮೊದಲ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಉಮೇಶ್ ಯಾದವ್ ಹೊರತಾಗಿ ಚಹಾಲ್, ದುಬೆ, ಸೈನಿ ಮತ್ತು ಸ್ಟೈನ್ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ರು.
ರಾಹುಲ್, ಮ್ಯಾಕ್ಸ್‌ವೆಲ್, ಪೂರನ್, ಮಯಾಂಕ್ ರಂತಹ ಸ್ಫೋಟಕ ಆಟಗಾರರು ಪಂಜಾಬ್ ತಂಡದಲ್ಲಿದ್ದಾರೆ. ಮೊಹಮ್ಮದ್ ಶಮಿ, ರವಿ ಬಿಶ್ನೋಯ್, ಶೆಲ್ಡನ್ ಕಾಟ್ರೆಲ್ ಮತ್ತು ಕೆ. ಗೌತಮ್ ಪಂಜಾಬ್ ಬೌಲಿಂಗ್ನ ಶಕ್ತಿಯಾಗಿದ್ದಾರೆ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕಣಕ್ಕಿಳಿದಿರಲಿಲ್ಲ. ಆದರೆ, ಇಂದಿನ ಪಂದ್ಯದಲ್ಲಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಇತ್ತ ಅಲ್ ರೌಂಡರ್ ಕ್ರಿಸ್ ಮೋರಿಸ್ ಗಾಯದಿಂದಾಗಿ ಆರ್ಸಿಬಿ ಪರ ಕಣಕ್ಕಿಳಿಯುತ್ತಿಲ್ಲ.
ಉಭಯ ತಂಡಗಳಲ್ಲೂ ಹೊಡಿ ಬಡಿ ಆಟಗಾರರೇ ತುಂಬಿದ್ದು, ಹೈ ವೋಲ್ಟೇಜ್ ಪಂದ್ಯಕ್ಕೆ ಪ್ರೇಕ್ಷಕರು ಕಾತರರಾಗಿದ್ದಾರೆ. ಒಂದೆಡೆ ತವರಿನ ತಂಡ ಮತ್ತೊಂದೆಡೆ ತವರಿನ ಆಟಗಾರರಿಂದ ತುಂಬಿರುವ ತಂಡ, ಯಾವ ತಂಡಕ್ಕೆ ಬೆಂಬಲ ನೀಡಬೇಕು ಎಂದು ರಾಜ್ಯದ ಅಭಿಮಾನಿಗಳು ಗೊಂದಲದಲ್ಲಿದ್ದಾರೆ.