ಅಲ್ ಅಮೆರತ್ (ಓಮನ್): ನಿನ್ನೆಯಿಂದ ಆರಂಭಗೊಂಡಿರುವ ವಿಶ್ವಕಪ್ ಟಿ-20 ಬಿ ಗ್ರೂಪ್ ಹಂತದ ಪಂದ್ಯದಲ್ಲಿ ಸ್ಕಾಟ್ಲೆಂಡ್ ಬಲಿಷ್ಟ ಬಾಂಗ್ಲಾದೇಶಕ್ಕೆ ಅಚ್ಚರಿ ರೀತಿಯಲ್ಲಿ ಸೋಲುಣಿಸಿದೆ. ಭಾನುವಾರ ರಾತ್ರಿ ನಡೆದ ಮೊದಲ ದಿನದ ಪಂದ್ಯದಲ್ಲಿ 6 ರನ್ಗಳ ರೋಚಕ ಜಯ ದಾಖಲಿಸಿದ ಸ್ಲಾಟ್ಲೆಂಡ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡ ಉತ್ತಮ ಆರಂಭ ಪಡೆದುಕೊಂಡಿತ್ತು. ಸ್ಕಾಟ್ಲೆಂಡ್ನ ಪ್ರಮುಖ ಆಟಗಾರರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೆ ವಿಕೆಟ್ ಒಪ್ಪಿಸಿದರು. ಆರಂಭಿಕ ಮುನ್ಸಿ 23 ಬಾಲ್ನಲ್ಲಿ 29 ರನ್ಗಳಿಸಿ ತಂಡಕ್ಕೆ ಆಸರೆಯಾದರು. ಇವರ ಬಳಿಕ ಬ್ಯಾಟರ್‌ಗಳು ಒಬ್ಬೊಬ್ಬರಾಗಿ ಪೆವಿಲಿಯನ್ ಸೇರಿಕೊಂಡರು. ಒಟ್ಟಾರೆ ಸ್ಕಾಟ್ಲೆಂಡ್ 50 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಕೊನೆಯ ಹಂತದಲ್ಲಿ ಬ್ಯಾಟಿಂಗ್ಗೆ ಇಳಿದ ಕ್ರಿಸ್ ಗ್ರೀವ್ಸ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 28 ಎಸೆತದಲ್ಲಿ ಅವರು 45 ರನ್ ಚಚ್ಚಿದರು. ಇದರಲ್ಲಿ 4 ಬೌಂಡರಿ 2 ಸಿಕ್ಸರ್ ಸೇರಿದ್ದವು. ಇವರ ಜೊತೆ ಮಾರ್ಕ್ ವ್ಯಾಟ್ 17 ಎಸೆತಕ್ಕೆ 22 ರನ್ ಗಳಿಸಿ ತಂಡ 140 ರನ್ ಕಲೆ ಹಾಕುವಲ್ಲಿ ಯಶಸ್ವಿಯಾದರು.
ಅಂತಿಮವಾಗಿ, ಸ್ಕಾಟ್ಲೆಂಡ್ 20 ಓವರ್ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 140 ರನ್ ಗಳಿಸುವಲ್ಲಿ ಯಶ ಕಂಡಿತು. ಇನ್ನು, ಬಾಂಗ್ಲಾಪರ ಮೆಹದಿ ಹಸನ್ 3 ವಿಕೆಟ್ ಪಡೆದರೆ, ಮುಸ್ತಫಿಜುರ್, ಶಕಿಬ್ ತಲಾ 2, ಟಸ್ಕಿನ್ ಅಹ್ಮದ್, ಸೈಫುದ್ದಿನ್ ತಲಾ 1 ವಿಕೆಟ್ ಪಡೆದರು.
ಇದಾದ ಬಳಿಕ, ಬ್ಯಾಟಿಂಗ್ಗೆ ಇಳಿದ ಬಾಂಗ್ಲಾ ತಂಡ ಕಡಿಮೆ ಮೊತ್ತದ ಗುರಿ ತಲುಪಲು ಉತ್ತಮ ಆರಂಭ ಪಡೆಯುವಲ್ಲಿ ಎಡವಿಬಿತ್ತು. ಆರಂಭಿಕರಾದ ಸೌಮ್ಯ ಸರ್ಕಾರ್ ಹಾಗೂ ಲಿಟನ್ ದಾಸ್ ಇಬ್ಬರೂ 5 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಆರಂಭದಲ್ಲೇ ಸ್ಕಾಟ್ಲೆಂಡ್ ಮೇಲುಗೈ ಸಾಧಿಸಿ ಬಾಂಗ್ಲಾವನ್ನು ಇನ್ನಿಲ್ಲದಂತೆ ಕಾಡಿತು. ಬಳಿಕ ರಕ್ಷಣಾತ್ಮಕ ಆಟದ ಮೊರೆಹೋದ ಶಕಿಬ್ ಅಲ್ ಹಸನ್ 20 (28) ಹಾಗೂ ಮುಸ್ಫಿಕರ್ ರಹೀಂ 38 (36) ಕಲೆಹಾಕಿ ಉತ್ತಮ ಜೊತೆಯಾಟ ನೀಡಿದರು. ಆದರೆ ನಂತರದಲ್ಲಿ ಈ ಇಬ್ಬರೂ ವಿಕೆಟ್ ಒಪ್ಪಿಸಿದ ಬಳಿಕ ಬಾಂಗ್ಲಾ ತಂಡದ ಲೆಕ್ಕಾಚಾರ ಉಲ್ಟಾ ಆಗಿತ್ತು.
ನಂತರ ಕ್ರೀಸ್ಗೆ ಬಂದ ಮಹಮದುಲ್ಲಾ 23 (22), ಆಫಿಫ್ ಹೊಸೈನ್ 18 (12) ರನ್ಗಳಿಸಲು ಪರದಾಡಿದರು. ಕೊನೆಯಲ್ಲಿ ಬ್ಯಾಟಿಂಗ್ ಇಳಿದ ಮೆಹದಿ ಹಸನ್ 5 ಬಾಲ್ನಲ್ಲಿ 13 ರನ್ ಗಳಿಸಿ ಗೆಲುವಿಗಾಗಿ ಅಬ್ಬರಿಸಿದರಾದರೂ ನಿಗದಿತ ಗುರಿ ತಲುಪಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಬಾಂಗ್ಲಾ 20 ಓವರ್ ಅಂತ್ಯಕ್ಕೆ 134 ರನ್ಗಳಿಸಿ 6 ರನ್ಗಳಿಂದ ಸೋಲೊಪ್ಪಿಕೊಂಡಿತು.
ಸ್ಕಾಟ್ಲೆಂಡ್ ಪರ ಬ್ರಾಡ್ಲಿ ವೀಲ್ 3, ಕ್ರಿಸ್ ಗ್ರೀವ್ಸ್ 2, ಜೋಷ್ ಡೇವ್, ಮಾರ್ಕ್ ವ್ಯಾಟ್ ತಲಾ 1 ವಿಕೆಟ್ ಪಡೆದಿದ್ದಾರೆ.