ಲಂಡನ್: ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆ.ಎಲ್.ರಾಹುಲ್ 212 ಎಸೆತಗಳಿಂದ ಆಕರ್ಷಕ ಶತಕ ಬಾರಿಸಿದ್ದಾರೆ. 78ನೇ ಓವರ್‌ನಲ್ಲಿ ಮಾರ್ಕ್ ಪುಡ್ ಅವರ 3ನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ 6ನೇ ಶತಕವನ್ನು ಪೂರೈಸಿದ್ದಾರೆ.
ಲಂಡನ್ ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದು ಶತಕ ಬಾರಿಸಿದ ಭಾರತದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾದರು. ಇದಕ್ಕೂ ಮೊದಲು ರವಿ ಶಾಸ್ತ್ರಿ(1990) ಹಾಗೂ ವಿನೂ ಮಂಕಡ್(1952) ಈ ಸಾಧನೆಯನ್ನು ಮಾಡಿದ್ದರು.
ಇದನ್ನೂ ಓದಿ: ರೋಹಿತ್ - ರಾಹುಲ್ 120ರನ್ಗಳ ಜೊತೆಯಾಟ..10 ವರ್ಷದ ನಂತರ ಈ ದಾಖಲೆ ಬರೆದ ಆರಂಭಿಕ ಜೋಡಿ!
ಇನ್ನೂ, ಇಂದಿನ ಪಂದ್ಯದಲ್ಲಿ ರಾಹುಲ್‌ಗೆ ಸಾಥ್ ನೀಡಿದ್ದ ಮತ್ತೊಬ್ಬ ಆರಂಭಿಕ ರೋಹಿತ್ ಶರ್ಮಾ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಶತಕದ ಸಮೀಪಕ್ಕೆ ಬಂದು 83 ರನ್ ಗಳಿಸಿದ್ದಾಗ ಜೇಮ್ಸ್ ಆ್ಯಂಡ್ರೆಸನ್ ಎಸೆತದಲ್ಲಿ ಬೌಲ್ಡ್ ಆದರು. ಬಳಿಕ ರಾಹುಲ್ ಜೊತೆ ಗೂಡಿದ ನಾಯಕ ವಿರಾಟ್ ಕೊಹ್ಲಿ 42 ರನ್ ಒಲ್ಲಿ ರಾಬಿನ್ಸನ್ ಬೌಲಿಂಗ್‌ನಲ್ಲಿ ಜೋ ರೂಟ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 248 ಎಸೆತಗಳಿಂದ 1 ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 127 ರನ್ ಗಳಿಸಿರುವ ರಾಹುಲ್ ಹಾಗೂ 1 ರನ್ ಮೂಲಕ ಖಾತೆ ತೆರೆದಿರುವ ಅಜಿಂಕ್ಯಾ ರಹಾನೆ ಕ್ರೀಸ್‌ನಲ್ಲಿದ್ದು 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊದಲ ದಿನದಾಟ ಮುಕ್ತಾಯದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 276 ರನ್‌ಗಳಿಸಿದೆ. ಜೇಮ್ಸ್ ಆ್ಯಂಡ್ರಿಸನ್ಸ್ 2 ಹಾಗೂ ಒಲಿ ರಾಬಿನ್ಸನ್ 1 ವಿಕೆಟ್ ಕಬಳಿಸಿದರು.