ದುಬೈ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಐಸಿಸಿ ಪುರುಷರ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡರೆ, ಮಹಿಳಾ ವಿಭಾಗದಲ್ಲಿ ಭಾರತದ ಜೆಮಿಮಾ ರೋಡ್ರಿಗಸ್ ಮತ್ತು ಮಂಕಡಿಂಗ್ ಖ್ಯಾತಿಯ ದೀಪ್ತಿ ಶರ್ಮಾ ರೇಸ್ನಲ್ಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಣೆ ಬಿಡುಗಡೆ ಮಾಡಿದ್ದು, ಪ್ರಶಸ್ತಿಗಾಗಿ ಭಾರತದ ಮೂವರು ಆಟಗಾರರು ರೇಸ್ನಲ್ಲಿದ್ದಾರೆ. ಇದಲ್ಲದೇ, ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್, ಜಿಂಬಾಬ್ವೆಯ ಸಿಕಂದರ್ ರಝಾ ಕೂಡ ಪ್ರಶಸ್ತಿಯ ಸೆಣಸಾಟದಲ್ಲಿದ್ದಾರೆ.
ಜಿಂಬಾಬ್ವೆಯ ಸಿಕಂದರ್ ರಝಾ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ರಝಾ ಆಗಸ್ಟ್‌ನಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದ್ದು, ಮತ್ತೊಮ್ಮೆ ಪ್ರಶಸ್ತಿ ರೇಸ್ನಲ್ಲಿದ್ದಾರೆ. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತು ಡೇವಿಡ್ ಮಿಲ್ಲರ್ ವಿಶ್ವಕಪ್ನಲ್ಲಿ ನೀಡುತ್ತಿರುವ ಪ್ರದರ್ಶನಕ್ಕಾಗಿ ಅವರು ಪ್ರಶಸ್ತಿಗೆ ಸೂಚಿತರಾಗಿದ್ದಾರೆ.
ಇತ್ತೀಚೆಗೆ ಮುಗಿದ ಏಷ್ಯಾಕಪ್ನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ಕ್ರಿಕೆಟ್ ವನಿತೆಯರಾದ ಜೆಮಿಮಾ ರೋಡ್ರಿಗಸ್ ಮತ್ತು ದೀಪ್ತಿ ಶರ್ಮಾ ಅವರು ಐಸಿಸಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಜೆಮಿಮಾ ರೋಡ್ರಿಗಸ್ ಏಷ್ಯಾಕಪ್ನಲ್ಲಿ ಅತಿಹೆಚ್ಚು ರನ್ಗಳಿಸಿದ ಆಟಗಾರ್ತಿಯಾಗಿದ್ದರೆ, ಮಂಕಡಿಂಗ್ನಿಂದ ಸದ್ದು ಮಾಡಿದ ದೀಪ್ತಿ ಶರ್ಮಾ ಸರಣಿಶ್ರೇಷ್ಠ ಆಟಗಾರ್ತಿಯಾಗಿ ಹೊರಹೊಮ್ಮಿದ್ದರು. ಪಾಕಿಸ್ತಾನದ ವನಿತಾ ಕ್ರಿಕೆಟರ್ ದಾರ್ ಕೂಡ ಪಟ್ಟಿಯಲ್ಲಿದ್ದಾರೆ.
ಯಾವ ಆಟಗಾರರಿಗೆ ಪ್ರಶಸ್ತಿ ನೀಡಬೇಕು ಎಂಬ ಬಗ್ಗೆ ವೋಟಿಂಗ್ ಮಾಡಲು ಅಭಿಮಾನಿಗಳಿಗೆ ಐಸಿಸಿ ಅವಕಾಶ ನೀಡಿದೆ. ಮುಂದಿನ ವಾರ ಪ್ರಶಸ್ತಿ ವಿಜೇತರನ್ನು ಪ್ರಕಟಿಸಲಾಗುತ್ತದೆ.
ಏನಿದು ಐಸಿಸಿ ತಿಂಗಳ ಪ್ರಶಸ್ತಿ: ಕ್ಯಾಲೆಂಡರ್ನ ಪ್ರತಿ ತಿಂಗಳ ಮೊದಲ ದಿನದಿಂದ ಕೊನೆಯ ದಿನದವರೆಗೂ ಆಟಗಾರರು ನೀಡುವ ಪ್ರದರ್ಶನದ ಮೇಲೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ತಿಂಗಳೂ ಓರ್ವ ಮಹಿಳಾ, ಪುರುಷ ಕ್ರಿಕೆಟ್ ಆಟಗಾರರನ್ನು ತಿಂಗಳ ಉತ್ತಮ ಪ್ರದರ್ಶನ ಎಂದು ಐಸಿಸಿ ಘೋಷಿಸುತ್ತದೆ. ಶಾರ್ಟ್ಲಿಸ್ಟ್ ಮಾಡಿದ ಆಟಗಾರರ ಪಟ್ಟಿಯನ್ನು ಘೋಷಿಸಿ, ಐಸಿಸಿಯಲ್ಲಿ ನೋಂದಾಯಿಸಿದ ಅಭಿಮಾನಿಗಳು ಅದರ ವೆಬ್‌ಸೈಟ್ ಮೂಲಕ ಮತ ಚಲಾಯಿಸಬಹುದು. ಪ್ರತಿ ತಿಂಗಳ ಎರಡನೇ ಸೋಮವಾರ ಅತಿಹೆಚ್ಚು ಮತ ಪಡೆದು ವಿಜೇತರಾದ ನೆಚ್ಚಿನ ಆಟಗಾರ, ಆಟಗಾರ್ತಿಯರನ್ನು ಘೋಷಿಸಲಾಗುತ್ತದೆ.
ಓದಿ: ಕೊಹ್ಲಿಗೆ ಫಿಟ್ನೆಸ್ ಫ್ರೀಕ್, ಆತನ ದಾಖಲೆಗಳು ಸೂಪರ್ ಫ್ರೀಕಿಶ್: ಶೇನ್ ವ್ಯಾಟ್ಸನ್