ನವದೆಹಲಿ: ಗಲ್ಲಿ ಕ್ರಿಕೆಟ್ ಮಾದರಿಯ ಟಿ10 (10 ಓವರ್) ಲೀಗ್ ಟೂರ್ನಿ ಇದೇ ಜೂನ್ 14 ರಿಂದ ಆರಂಭವಾಗಲಿದ್ದು, ಜೂನ್ 28 ರವರೆಗೂ ನಡೆಯಲಿದೆ. ಇದರಲ್ಲಿ 90ಕ್ಕೂ ಅಧಿಕ ಮಾಜಿ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. 14 ದಿನಗಳ ಕಾಲ ನಡೆಯುವ ಲೀಗ್ನಲ್ಲಿ ನಿವೃತ್ತರಾದ ಆಟಗಾರರ ಕ್ರಿಕೆಟ್ ಅನ್ನು ಮತ್ತೊಮ್ಮೆ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.
ಉಭಯ ತಂಡಗಳಿಗೆ ತಲಾ 10 ಓವರ್ ಸೀಮಿತವಾಗಿರುವ ಟೂರ್ನಿ ರೋಮಾಂಚಕ ಅನುಭವ ನೀಡಲಿದ್ದು, 19 ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಯು 6 ಫ್ರಾಂಚೈಸಿಗಳನ್ನು ಹೊಂದಿದೆ. ಪ್ರತಿ ತಂಡಕ್ಕೆ ಬಾಲಿವುಡ್ ಸೆಲೆಬ್ರಿಟಿಗಳ ಸಹಮಾಲೀಕತ್ವವಿದೆ. ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಸಹಭಾಗಿತ್ವ ಇರಲಿದೆ.
2ನೇ ಟಿ10 ಲೀಗ್: ಕ್ರಿಕೆಟ್ ಜಗತ್ತಿನ 2ನೇ ಟಿ10 ಲೀಗ್ ಇದಾಗಲಿದೆ. ಇದಕ್ಕೂ ಮೊದಲು ಅಬು ಧಾಬಿ ಲೀಗ್ ವಿಶ್ವದ ಏಕೈಕ ಟಿ10 ಟೂರ್ನಿ ಎನಿಸಿಕೊಂಡಿದೆ. ಇದೀಗ ಭಾರತದಲ್ಲಿ ಅದೇ ಮಾದರಿಯ ಟೂರ್ನಿ ಆಯೋಜಿಸಲಾಗುತ್ತಿದೆ. ಅಬು ಧಾಬಿ ಲೀಗ್ನ ಆಯೋಜಕರಾದ ಟಿಟೆನ್ ಗ್ಲೋಬಲ್ ಸ್ಫೋರ್ಟ್ಸ್ ಸಂಸ್ಥೆಯು ಇಂಡಿಯಾ ಮಾಸ್ಟರ್ಸ್ ಟೂರ್ನಿಯನ್ನು ಆಯೋಜಿಸುವ ಹೊಣೆ ಹೊತ್ತಿದೆ. ಈ ಮಾಸ್ಟರ್ಸ್ ಟೂರ್ನಿ ಅಭಿಮಾನಿಗಳಿಗೆ ಮನರಂಜನೆ ನೀಡುವುದು ಪಕ್ಕಾ ಎಂದು ಆಯೋಜಕರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒಟ್ಟು 90ಕ್ಕೂ ಅಧಿಕ ಮಾಜಿ ಕ್ರಿಕೆಟಿಗರು ಮತ್ತೆ ಕ್ರೀಡಾಂಗಣಕ್ಕೆ ಇಳಿಯಲಿದ್ದಾರೆ. ಕೇವಲ 90 ನಿಮಿಷಗಳ ಕಾಲ ನಡೆಯುವ ತಲಾ 10 ಓವರ್ಗಳ ಪಂದ್ಯಗಳಲ್ಲಿ ರೋಚಕತೆ ಇರಲಿದೆ. ಈಗಾಗಲೇ ಕ್ರಿಕೆಟ್ನಲ್ಲಿ ಟಿ-20 ಹೊಸ ಮನ್ವಂತರವನ್ನು ಸೃಷ್ಟಿಸಿದೆ. ಟಿ10 ಕೂಡ ಕ್ರಿಕೆಟ್ನಲ್ಲಿ ಹೊಸ ಭಾಷ್ಯ ಬರೆಯಲಿದೆ ಎಂದೇ ಅಂದಾಜಿಸಲಾಗಿದೆ.
ಭಾರತದ ಮಾಜಿ ಕ್ರಿಕೆಟ್ ತಾರೆಯರಾದ ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಮುರಳಿ ವಿಜಯ್, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಪ್ರಗ್ಯಾನ್ ಓಜಾ, ಮೊಹಮ್ಮದ್ ಕೈಫ್ ಮತ್ತು ಕೀರಾನ್ ಪೊಲಾರ್ಡ್, ಡ್ವೇನ್ ಬ್ರಾವೋ, ಜಾಕ್ ಕಾಲಿಸ್, ಇಯಾನ್ ಮೋರ್ಗನ್, ಕ್ರಿಸ್ ಗೇಲ್, ಬ್ರೆಟ್ಲೀ ಅವರಂತಹ ಅನೇಕ ಕ್ರಿಕೆಟ್ ದಿಗ್ಗಜರು ಭಾರತದಲ್ಲಿ ನಡೆಯಲಿರುವ ಇಂಡಿಯನ್ ಮಾಸ್ಟರ್ಸ್ ಟಿ10 ಲೀಗ್ ಮೊದಲ ಆವೃತ್ತಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಟೂರ್ನಿಯ ಲೋಗೋ ಅನಾವರಣ: ಮುಂಬೈನ ಲೋವರ್ ಪರೇಲ್‌ನ ಸೇಂಟ್ ರೆಗಿಸ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿ10 ಟೂರ್ನಿಯ ಲೋಗೋವನ್ನು ಅನಾವರಣ ಮಾಡಲಾಯಿತು. "ಭಾರತದಲ್ಲಿ ಕ್ರಿಕೆಟ್‌ನ ಹೊಸ ಅವತಾರವನ್ನು ಪರಿಚಯಿಸಲು ಕಾತುರರಾಗಿದ್ದೇವೆ. ನಿವೃತ್ತ ಆಟಗಾರರು ಇದಕ್ಕೆ ಹೆಚ್ಚಿನ ಮೆರುಗು ನೀಡಲಿದ್ದಾರೆ" ಎಂದು ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಶಾಜಿ ಉಲ್ ಮುಲ್ಕ್ ಹೇಳಿದರು.
ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಮಾತನಾಡಿ, "ನಾನು ಅಬುಧಾಬಿ ಟಿ10 ಟೂರ್ನಿಯಲ್ಲಿ ಕಾಮೆಂಟರಿ ಮಾಡಿದ್ದೇನೆ. ಅದರಲ್ಲಿ ಈಗ ಆಡಲು ಬಯಸುತ್ತೇನೆ. ಕಾರಣ ಟೂರ್ನಿ ರೋಮಾಂಚಕಾರಿ ಸ್ವರೂಪದ್ದಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನ ಕೌಶಲ್ಯ ಮತ್ತು ಶಕ್ತಿಯ ಆಟವಾಗಿದೆ. ಇದು ಅಭಿಮಾನಿಗಳಿಗೂ ರಸದೌತಣ ನೀಡಲಿದೆ. ಕ್ರಿಕೆಟ್‌ನ ಭವಿಷ್ಯವನ್ನೇ ಬದಲಿಸುವ ಟೂರ್ನಿ ಇದಾಗಲಿದೆ" ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಕ್ರಿಕೆಟಿಗರಿಗೆ ಅವಕಾಶ: ರಾಬಿನ್ ಉತ್ತಪ್ಪ ಮಾತನಾಡಿ, "ನಿವೃತ್ತ ಆಟಗಾರರು ಮತ್ತೆ ಅಂಗಳಕ್ಕೆ ಇಳಿದು ಕ್ರಿಕೆಟ್ ಆಡುವಾಗ ಬಹಳಷ್ಟು ನೆನಪುಗಳನ್ನು ಮರಳಿ ತರುತ್ತದೆ. ಬಾಲ್ಯದಲ್ಲಿ ನಾವು ಟೆನಿಸ್ ಬಾಲ್ನಲ್ಲಿ ಸೀಮಿತ ಓವರ್ಗಳ ಕ್ರಿಕೆಟ್ ಆಡುತ್ತಿದ್ದೆವು. ಅಂಥದ್ದೇ ಅನುಭವ ಈ ಟೂರ್ನಿ ನೀಡಲಿದೆ. ಕ್ರಿಕೆಟ್ನಿಂದ ನಿವೃತ್ತರಾಗಿರುವ ಆಟಗಾರರು ಮತ್ತೆ ಕಣಕ್ಕಿಳಿಯುವ ಅವಕಾಶ ಸಿಗಲಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಕ್ರಿಕೆಟ್ ಅನ್ನು ಮತ್ತೆ ಕಣ್ತುಂಬಿಕೊಳ್ಳಬಹುದು ಎಂದು ಹೇಳಿದರು.
ಇದನ್ನೂ ಓದಿ: ನಿತೀಶ್ ರಾಣಾ ಹೆಗಲಿಗೆ ಕೆಕೆಆರ್ ಹೊಣೆ: ಶಾರ್ದೂಲ್, ನರೈನ್ ನಿರೀಕ್ಷೆ ಹುಸಿ