ಪೋರ್ಟ್ ಆಫ್ ಸ್ಪೇನ್ : ಇಲ್ಲಿನ ಕ್ವೀನ್ಸ್ ಪಾರ್ಕ್ ಓವೆಲ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತವು ಭರ್ಜರಿ ಬ್ಯಾಟಿಂಗ್ ನಡೆಸಿದೆ. ಭಾರತವು ಈಗಾಗಲೇ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಎರಡು ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮೊದಲ ದಿನದಂತ್ಯಕ್ಕೆ 288 ರನ್ ಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ ಎರಡನೇ ದಿನದಲ್ಲಿ (ಶುಕ್ರವಾರ) 438 ರನ್ ಪೇರಿಸಿದೆ. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಕೆರಿಬಿಯನ್ ಪಡೆ ಎರಡನೇ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿ ಆಟ ಮುಂದುವರೆಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಿದರು. 500ನೇ ಅಂತಾರಾಷ್ಟ್ರೀಯ ಪಂದ್ಯ ಆಡಿದ ವಿರಾಟ್ ಕೊಹ್ಲಿ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿದರು. ಜೊತೆಗೆ ರವಿಚಂದ್ರನ್ ಅಶ್ವಿನ್ ಅವರ ಸಮಯೋಚಿತ ಆಟದಿಂದ ಭಾರತವು ಬೃಹತ್ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು.
ರೋಹಿತ್ ಶರ್ಮಾ (80) ಮತ್ತು ಯಶಸ್ವಿ ಜೈಸ್ವಾಲ್ (57) ಜೋಡಿ 131 ರನ್ಗಳ ಜೊತೆಯಾಟವಾಡಿದರು. ಭೋಜನ ವಿರಾಮದ ಹೊತ್ತಿಗೆ ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ 121 ರನ್ ಗಳಿಸಿತ್ತು. ಭೋಜನ ವಿರಾಮದ ಬಳಿಕ ಭಾರತ ಕೇವಲ 61 ವಿಕೆಟ್ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಜೈಸ್ವಾಲ್ ಹೋಲ್ಡರ್ ಬೌಲಿಂಗ್ನಲ್ಲಿ ,ಗಿಲ್ ರೋಚ್ ಎಸೆತದಲ್ಲಿ ಔಟಾದರು. ರೋಹಿತ್ ಶರ್ಮಾ ವಾರಿಕ್ಯಾನ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಮತ್ತೆ ಶತಕ ವಂಚಿತರಾದರು. ಅಜಿಂಕ್ಯಾ ರಹಾನೆ (8) ರನ್ ಗಳಿಸಿ ಔಟಾದರು.
4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಸಂಕಷ್ಟದಲ್ಲಿ ಸಿಲುಕಿದ್ದ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಜಡೇಜಾ ನೆರವಾದರು. ವಿರಾಟ್ ಕೊಹ್ಲಿ 11 ಬೌಂಡರಿ ಮೂಲಕ 121 ರನ್ ಗಳಿಸಿದರೆ, ರವೀಂದ್ರ ಜಡೇಜಾ 61 ರನ್ ಗಳಿಸಿ ರೋಚ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಇಶನ್ ಕಿಶನ್ (25), ರವಿಚಂದ್ರನ್ ಅಶ್ವಿನ್(56) ಆಟವಾಡಿ ತಂಡವು 438 ರನ್ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಭಾರತ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 438 ರನ್ ಗಳಿಸಿತು. ವೆಸ್ಟ್ ಇಂಡೀಸ್ ಪರ ಕೇಮರ್ ರೋಚ್ ಮತ್ತು ಜೊಮೆಲ್ ವ್ಯಾರಿಕಾನ್ ತಲಾ 3 ವಿಕೆಟ್ ಪಡೆದರು. ಜೇಸನ್ ಹೋಲ್ಡರ್ 2 ವಿಕೆಟ್ ಪಡೆದರೆ, ಶನನ್ ಗ್ಯಾಬ್ರಿಯಲ್ 1 ವಿಕೆಟ್ ಪಡೆದರು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್, ತಗೆನರೇನ್ ಚಂದರ್ಪಾಲ್ 33 ರನ್ ಗಳಿಸಿ ಔಟಾದರೆ, ಕ್ರಾಗ್ ಬ್ರೆತ್ವೇಟ್ 37 ರನ್ , ಕ್ರಿಕ್ ಮೆಕ್ಕೆಂಜಿ 14 ರನ್ ಗಳಿಸಿ ಮೂರನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ. ಈ ಮೂಲಕ ಭಾರತವು 352 ರನ್ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ. ಭಾರತದ ಪರ ರವೀಂದ್ರ ಜಡೇಜಾ 1 ವಿಕೆಟ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : India vs West Indies 2nd Test: ಟೆಸ್ಟ್ನಲ್ಲಿ 29ನೇ ಶತಕ ಸಿಡಿಸಿದ ವಿರಾಟ್.. ಸರ್ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಕೊಹ್ಲಿ