ಕೊಲಂಬೊ: ಶುಕ್ರವಾರ ಭಾರತ ಮತ್ತು ಶ್ರೀಲಂಕಾ ನಡುವೆ ಕೊನೆಯ ಏಕದಿನ ಪಂದ್ಯ ನಡೆಯಲಿದೆ. ಪ್ರವಾಸಿ ತಂಡ ಈಗಾಗಲೇ 2-0ಯಲ್ಲಿ ಸರಣಿಯನ್ನು ಗೆದ್ದುಕೊಂಡಿರುವುದರಿಂದ ಕೊನೆಯ ಔಪಚಾರಿಕ ಪಂದ್ಯದಲ್ಲಿ ಬೆಂಚ್ ಕಾಯ್ದಿರುವ ದೇವದತ್ ಪಡಿಕ್ಕಲ್, ಕೆ.ಗೌತಮ್ ಹಾಗೂ ಚೇತನ್ ಸಕಾರಿಯ ಅಥವಾ ನವದೀಪ್ ಸೈನಿ ಅಂತಹ ಯುವ ಬೌಲರ್ಗಳಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಈ ಸರಣಿಗೂ ಮುನ್ನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಂಡದಲ್ಲಿರುವ ಎಲ್ಲಾ ಆಟಗಾರರಿಗೂ ಈ ಸರಣಿಯಲ್ಲಿ ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ, ಎ ಸರಣಿಯಲ್ಲಿ ಎಲ್ಲರಿಗೂ ಅವಕಾಶ ಮಾಡಿಕೊಡುತ್ತಿದ್ದೆವು. ಆದರೆ ಇದು ಅಂತಾರಾಷ್ಟ್ರೀಯ ಸರಣಿಯಾಗಿದ್ದು, ಕೆಲವರು ಇನ್ನಷ್ಟು ದಿನ ಬೆಂಚ್ ಕಾಯಬೇಕಾಗುತ್ತದೆ. ಆದರೆ ಆ ಎಲ್ಲಾ ಯುವ ಆಟಗಾರರಿಗೆ ಈ ಸರಣಿ ಅತ್ಯುತ್ತಮ ಅನುಭವ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದರು.
ಆದರೆ ಭಾರತ ತಂಡ ಈಗಾಗಲೆ ಸರಣಿ ಗೆದ್ದಿರುವುದರಿಂದ ಚಹಲ್, ಕೃನಾಲ್ ಪಾಂಡ್ಯ ಬದಲಿಗೆ ಕೆ. ಗೌತಮ್, ಭುವನೇಶ್ವರ್ ಕುಮಾರ್ ಅಥವಾ ದೀಪಕ್ ಚಹಾರ್ ಬದಲಿಗೆ ಚೇತನ್ ಸಕಾರಿಯಾಗೆ ಅವಕಾಶ ಮಾಡಿಕೊಡುವ ಅವಕಾಶವಿದೆ. ಆದರೆ ಇದೆಲ್ಲಾ ದ್ರಾವಿಡ್ ಮತ್ತು ನಾಯಕ ಶಿಖರ್ ಧವನ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ.
ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿ ಮನೀಶ್ ಪಾಂಡೆ
ಮೊದಲ ಪಂದ್ಯದಲ್ಲಿ ರನ್ಗಳಿಸಲು ಪರದಾಡಿದ್ದ ಕನ್ನಡಿಗ ಮನೀಶ್ ಪಾಂಡೆ ಎರಡನೇ ಪಂದ್ಯದಲ್ಲಿ ಉತ್ತಮ ರನ್ಗಳಿಸುತ್ತಿರುವಾಗ ದುರದೃಷ್ಟಕರ ರೀತಿಯಲ್ಲಿ ರನ್ಔಟ್ ಆಗಿದ್ದರು. ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ನಿರೀಕ್ಷಿಸುತ್ತಿರವ ಮನೀಶ್ ಪಾಂಡೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಮತ್ತೊಂದು ಅವಕಾಶವನ್ನು ದ್ರಾವಿಡ್ ನೀಡಲಿದ್ದಾರಾ ಅಥವಾ ಯುವ ಕ್ರಿಕೆಟಿಗರಿಗೆ ಮಣೆ ಹಾಕಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.
ಪಡಿಕ್ಕಲ್/ರುತುರಾಜ್ ಗಾಯಕ್ವಾಡ್ ನಡುವೆ ಪೈಪೋಟಿ
ನಾಳಿನ ಡೆಡ್ ರಬ್ಬರ್ನಲ್ಲಿ ದೇಶಿ ಕ್ರಿಕೆಟ್ನ ರನ್ ಸರದಾರರಾಗಿರುವ ರುತುರಾಜ್ ಗಾಯಕ್ವಾಡ್ ಮತ್ತು ಕರ್ನಾಟಕದ ದೇವದತ್ ಪಡಿಕ್ಕಲ್ಗೆ ಪೃಥ್ವಿ ಶಾ ಜಾಗದಲ್ಲಿ ಆಡಲು ತೀವ್ರ ಸ್ಪರ್ಧೆಯಿದೆ. ಇಬ್ಬರ ದೇಶಿ ಕ್ರಿಕೆಟ್ ಸರಾಸರಿ ಮತ್ತು ದಾಖಲೆಗಳನ್ನು ನೋಡಿದರೆ ಪಡಿಕ್ಕಲ್ಗೆ ಅವಕಾಶ ಸಿಗುವ ಸಾಧ್ಯತೆಯೇ ಹೆಚ್ಚಿದೆ.
ಆದರೆ ಗಾಯದಿಂದ ಚೇತರಿಸಿಕೊಂಡಿರುವ ವಿಕೆಟ್ ಕೀಪರ್ ಸಂಜು ಸಾಮ್ಸನ್ಗೆ ಅವಕಾಶ ಮಾಡಿಕೊಡಬೇಕಾದರೆ ಮನೀಶ್ ಪಾಂಡೆಯನ್ನು ಹೊರಗಿಟ್ಟು, ಸಂಜುಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಮಾಡಿಕೊಡಬಹುದು. ಸ್ಪೋಟಕ ಬ್ಯಾಟ್ಸ್ಮನ್ ಇಶಾನ್ ಕಿಶನ್ ಬ್ಯಾಟ್ಸ್ಮನ್ ಇನ್ನಿಂಗ್ಸ್ ಆರಂಭಿಸಿದರೂ ಆಶ್ಚರ್ಯವಿಲ್ಲ.
ಇದನ್ನೂ ಓದಿ: 'ಇಂದಿರಾನಗರ ಮಾತ್ರವಲ್ಲ, ಅವರು ಇಡೀ ಭಾರತದ ಗೂಂಡಾ': ಕೋಚ್ ದ್ರಾವಿಡ್ ಬಗ್ಗೆ ಚಹರ್ ಮಾತು