ನವದೆಹಲಿ: ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಏಕದಿನ ಸರಣಿಯ ನಿರ್ಣಾಯಕ ಪಂದ್ಯ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಗೆಲ್ಲುವ ತಂಡ ಟ್ರೋಫಿ ಎತ್ತಿ ಹಿಡಿಯಲಿದೆ. 3 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ರಲ್ಲಿ ಸಮಬಲ ಸಾಧಿಸಿವೆ.
ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾಗೆ ತೆರಳಿರುವ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಸರಣಿಯನ್ನು ಗೆದ್ದು ಸಾಮರ್ಥ್ಯ ಸಾಬೀತುಪಡಿಸುವ ಹುಮ್ಮಸ್ಸಿನಲ್ಲಿದ್ದಾರೆ. ಸರಣಿಯಲ್ಲಿ ಆಡಿದ 2 ಪಂದ್ಯಗಳಲ್ಲಿ ರನ್ ಗಳಿಸಲು ವಿಫಲವಾಗಿದ್ದು, ಕೊನೆಯ ಪಂದ್ಯದಲ್ಲಿ ಸಿಡಿದು ವಿಶ್ವಕಪ್ಗೆ ತಾವು ಫಿಟ್ ಎಂಬುದನ್ನು ಸಾಬೀತು ಮಾಡಬೇಕಿದೆ.
ಇನ್ನೊಬ್ಬ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಕೂಡ ವೈಫಲ್ಯ ಅನುಭವಿಸಿದ್ದು, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತ ಕಲೆ ಹಾಕುತ್ತಿದ್ದಾರೆ. ಇದು ತಂಡಕ್ಕೆ ನೆರವಾಗಿದೆ.
ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತ, 2ನೇ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿ ಗೆಲುವು ಸಾಧಿಸಿತ್ತು. ಇಲ್ಲಿ ಶ್ರೇಯಸ್ ಅಯ್ಯರ್ ಶತಕ ಸಾಧನೆ ಮಾಡಿದರೆ, ಇಶಾನ್ ಕಿಶನ್ ಸ್ವಲ್ಪದರಲ್ಲೇ ಶತಕ ವಂಚಿತರಾಗಿದ್ದರು. ಮೊದಲ ಅವಕಾಶವನ್ನು ಬಾಚಿ ತಬ್ಬಿಕೊಂಡ ಶಹಬಾಜ್ ಅಹ್ಮದ್ 1 ವಿಕೆಟ್ ಉರುಳಿಸಿ ಆಯ್ಕೆ ಸಮರ್ಥಿಸಿಕೊಂಡರೆ, ದೀಪಕ್ ಚಹರ್ ಬದಲಿಗೆ ಕಣಕ್ಕಿಳಿದಿರುವ ವಾಷಿಂಗ್ಟನ್ ಸುಂದರ್ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ.
ಅಂತಾರಾಷ್ಟ್ರೀಯ ತಂಡಕ್ಕೆ ಇದೇ ಮೊದಲ ಬಾರಿಗೆ ಆಯ್ಕೆಯಾಗಿರುವ ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್ ಮತ್ತು ಮುಖೇಶ್ ಕುಮಾರ್ ಬೆಂಚ್ ಕಾಯುತ್ತಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬೌಲಿಂಗ್ನಲ್ಲಿ ಮೊಹಮದ್ ಸಿರಾಜ್ ಮಿಂಚುತ್ತಿದ್ದ ಕಳೆದ ಪಂದ್ಯದಲ್ಲಿ 3 ವಿಕೆಟ್ ಪಡೆದಿದ್ದರು. ಶಾರ್ದೂಲ್ ಠಾಕೂರ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ಕೂಡ ದೈತ್ಯ ಆಟಗಾರರನ್ನು ಹೊಂದಿದ್ದರೂ, 2 ನೇ ಏಕದಿನ ಪಂದ್ಯವನ್ನು ಸೋತು ಸರಣಿ ಗೆಲುವು ತಪ್ಪಿಸಿಕೊಂಡಿದ್ದರು. ಕ್ವಿಂಟನ್ ಡಿ ಕಾಕ್, ನಾಯಕ ತೆಂಬ ಬವುಮಾ, ಹೆನ್ರಿಚ್ ಕ್ಲಾಸಿನ್, ಡೇವಿಡ್ ಮಿಲ್ಲರ್ ಬ್ಯಾಟಿಂಗ್ನಲ್ಲಿ ಸಿಡಿದರೆ, ಕಗಿಸೋ ರಬಾಡಾ, ಆ್ಯನ್ರಿಚ್ ನೋಕಿಯಾ ಬೌಲಿಂಗ್ನಲ್ಲಿ ಮಿಂಚಬೇಕಿದೆ.
ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ: ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮೈದಾನವನ್ನು ಕವರ್ ಮಾಡಲಾಗಿದೆ. ಇಂದು ಕೂಡ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ.
ಸಂಭಾವ್ಯ ತಂಡಗಳು- ಭಾರತ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅವೇಶ್ ಖಾನ್, ಮೊಹಮದ್ ಸಿರಾಜ್, ಶಹಬಾಜ್ ಅಹಮದ್, ವಾಷಿಂಗ್ಟನ್ ಸುಂದರ್.
ದಕ್ಷಿಣ ಆಫ್ರಿಕಾ: ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್, ತೆಂಬಾ ಬವುಮಾ/ರೀಜಾ ಹೆಂನ್ಸಿಕ್ಸ್, ಐಡೆನ್ ಮಾರ್ಕ್ರಂ, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಜಾರ್ನ್ ಫೋರ್ಚುಯಿನ್/ತಬ್ರೈಜ್ ಶಮ್ಸಿ, ಕಗಿಸೊ ರಬಾಡಾ, ಅನ್ರಿಚ್ ನೋಕಿಯಾ.
ಪಂದ್ಯದ ಸಮಯ- ಮಧ್ಯಾಹ್ನ 1.30 ಗಂಟೆಗೆ