ಕ್ರೈಸ್ಟ್‌ಚರ್ಚ್ (ನ್ಯೂಜಿಲ್ಯಾಂಡ್): ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಅಜೇಯ 215 ರನ್ಗಳ ಜೊತೆಯಾಟ ಆಡಿದ ಕೇನ್ ವಿಲಿಯಮ್ಸನ್ ಮತ್ತು ಹೆನ್ರಿ ನಿಕೋಲ್ಸ್ ಪಾಕ್ ವಿರುದ್ಧದ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ್ದಾರೆ.
ಎರಡನೇ ದಿನದಾಟದ ಅಂತ್ಯಕ್ಕೆ ಕಿವೀಸ್ 3 ವಿಕೆಟ್ ಕಳೆದುಕೊಂಡು 286 ರನ್ಗಳಿಸಿ 11 ರನ್ಗಳ ಹಿನ್ನಡೆ ಹೊಂದಿದೆ. ಭರ್ಜರಿ ಶತಕ ಸಿಡಿಸಿದ ಕೇನ್ ವಿಲಿಯಮ್ಸನ್ 112 ರನ್ ಮತ್ತು ನಿಕೋಲ್ಸ್ ಪ್ರಸ್ತುತ 89 ರನ್‌ಗಳಿಸಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನ ಪರ ಶಹೀನ್ ಅಫ್ರಿದಿ, ಮೊಹಮ್ಮದ್ ಅಬ್ಬಾಸ್, ಫಹೀಮ್ ಅಶ್ರಫ್ ತಲಾ ಒಂದು ವಿಕೆಟ್ ಕಬಳಿಸಿದರು.
ಎರಡನೆಯ ದಿನದಂದು ತಮ್ಮ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದ ನ್ಯೂಜಿಲ್ಯಾಂಡ್ ಆರಂಭಿಕ ಆಟಗಾರರಾದ ಟಾಮ್ ಲಾಥಮ್ ಮತ್ತು ಟಾಮ್ ಬ್ಲುಂಡೆಲ್ ಮೊದಲ ವಿಕೆಟ್‌ಗೆ 52 ರನ್ ಗಳಿಸಿ ತಂಡಕ್ಕೆ ಸ್ಥಿರವಾದ ಆರಂಭವನ್ನು ಒದಗಿಸಿದರು, ಆದರೆ ಆರು ಎಸೆತಗಳ ಅವಧಿಯಲ್ಲಿ ಇಬ್ಬರೂ ಆರಂಭಿಕ ಆಟಗಾರರನ್ನು ಔಟ್ ಆಗಿ ಹಿನ್ನೆಡೆ ಅನುಭವಿಸಿತು.
52 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲ್ಯಾಂಡ್ ತಂಡಕ್ಕೆ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಯಾವುದೇ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡರು. ಆದರೆ, ಭೋಜನದ ವಿರಾಮದ ನಂತರ, 12 ರನ್ ಗಳಿಸಿದ್ದ ರಾಸ್ ಟೇಲರ್ ಮೊಹಮ್ಮದ್ ಅಬ್ಬಾಸ್ಗೆ ವಿಕೆಟ್ ಒಪ್ಪಿಸಿದ್ರು. ಆದರೆ, ವಿಲಿಯಮ್ಸನ್ ಮತ್ತು ಹೆನ್ರಿ ನಿಕೋಲ್ಸ್ ಆತಿಥೇಯ ತಂಡಕ್ಕೆ ಆಸರೆಯಾಗಿ, ಎರಡನೇ ದಿನದ ಅಂತ್ಯದವರೆಗೂ ಬ್ಯಾಟ್ ಬೀಸಿದ್ರು.
ಮೊದಲ ಇನ್ನಿಂಗ್ಸ್ನಲ್ಲಿ ಬಿಗಿಯಾದ ದಾಳಿ ನಡೆಸಿದ ಕಿವೀಸ್ ಬೌಲರ್ಗಳು ಪಾಕಿಸ್ತಾನ ತಂಡವನ್ನು 297 ರನ್‌ಗಳಿಗೆ ನಿಯಂತ್ರಿಸಿದ್ದಾರೆ.