ಮೆಲ್ಬೋರ್ನ್: ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಜನಾಂಗೀಯ ನಿಂದನೆಗೆ ಒಳಗಾಗಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ಖಚಿತಪಡಿಸಿದೆ.
ಸಿಡ್ನಿ ಟೆಸ್ಟ್‌ನ ಎರಡನೇ ಮತ್ತು ಮೂರನೇ ದಿನ ಎಸ್‌ಸಿಜಿ ಮೈದಾನದಲ್ಲಿ ಜನಾಂಗೀಯವಾಗಿ ನಿಂದನೆಗೊಳಗಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಬಗ್ಗೆ ಭಾರತೀಯ ತಂಡವು ಅಧಿಕೃತ ದೂರು ದಾಖಲಿಸಿತ್ತು. ದೂರಿನ ನಂತರವೂ ಸಿರಾಜ್ ಮೇಲೆ ಜನಾಂಗೀಯ ನಿಂದನೆ ಮಾಡಲಾಗಿತ್ತು.
ಸಿಎ ಸಮಗ್ರತೆ ಮತ್ತು ಭದ್ರತೆಯ ಮುಖ್ಯಸ್ಥ ಸೀನ್ ಕ್ಯಾರೊಲ್ ಬುಧವಾರ ಸಿಡ್ನಿ ಟೆಸ್ಟ್ ಸಂದರ್ಭದಲ್ಲಿ ಪ್ರೇಕ್ಷಕರ ವರ್ತನೆಯ ತನಿಖೆಯ ಬಗ್ಗೆ ಹೊಸ ಮಾಹಿತಿಯನ್ನ ನೀಡಿದ್ದಾರೆ.
"ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಎಸ್‌ಸಿಜಿಯಲ್ಲಿ ಪ್ರೇಕ್ಷಕರ ವರ್ತನೆ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ವರದಿಯನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ ಸಲ್ಲಿಸಿದೆ" ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಹೇಳಿಕೆಯಲ್ಲಿ ತಿಳಿಸಿದೆ.
"ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಜನಾಂಗೀಯ ನಿಂದನೆಗೆ ಬಲಿಯಾಗಿದ್ದರು ಎಂದು ಸಿಎ ದೃಢಪಡಿಸುತ್ತದೆ. ಈ ಪ್ರಕರಣದ ಬಗ್ಗೆ ಸಿಎ ಸಂಪೂರ್ಣ ತನಿಖೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳು, ಟಿಕೆಟಿಂಗ್ ಡೇಟಾ ಮತ್ತು ವೀಕ್ಷಕರೊಂದಿಗೆ ಸಂದರ್ಶನಗಳು ಎಲ್ಲವನ್ನು ಪರಿಶೀಲನೆ ಮಾಡಲಾಗಿದೆ. ಎನ್ಎಸ್ಡಬ್ಲ್ಯೂ ಪೊಲೀಸರು ಸಂಪೂರ್ಣ ತನಿಖೆ ನಡೆಸಿದ್ದು ಜನಾಂಗೀಯ ನಿಂದನೆಯಾಗಿದ್ದು ದೃಢವಾಗಿದೆ ಎಂದು ಹೇಳಿದ್ದಾರೆ.
ಓದಿ : ಹೊರಗಟ್ಟಿದ್ದ 6 ಮಂದಿ ಅಪರಾಧಿಗಳಲ್ಲ, ಸಿರಾಜ್ರನ್ನ ನಿಂದಿಸಿದವರು ಸಿಗ್ಲಿಲ್ಲ.. ಐಸಿಸಿಗೆ ಸಿಎ ವರದಿ
"ಪಂದ್ಯ ನಡೆಯುವ ವೇಳೆ ಚಿತ್ರೀಕರಿಸಿದ ವಿಡಿಯೋ ಮತ್ತು ಬ್ರೂವಾಂಗ್ ಸ್ಟ್ಯಾಂಡ್ ಮುಂದೆ ಮಾಧ್ಯಮಗಳು ಫೋಟೋ ತೆಗೆದ ತನಿಖೆ ಆಧಾರದ ಮೇಲೆ ಟೆಸ್ಟ್‌ನ ಮೂರನೇ ದಿನದ 86 ನೇ ಓವರ್ ಮಗಿದ ಸಮಯದಲ್ಲಿ ಜನಾಂಗೀಯ ನಿಂದನೆಯಾಗಿದೆ ಎಂದು ತಿಳಿದುಬಂದಿದೆ ಎಂದು ಸಿಎ ಸ್ಪಷ್ಟಪಡಿಸಿದೆ.