ತರೌಬಾ (ಟ್ರಿನಿಡಾಡ್): ಇಲ್ಲಿನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ವಿರುದ್ಧ ಭಾರತಕ್ಕೆ 174 ರನ್‌ಗಳ ಭರ್ಜರಿ ಗೆಲುವು ದೊರೆತಿದೆ. ಈ ಜಯದ ಮೂಲಕ ಭಾರತ ಅಂಡರ್ 19 ತಂಡ ಸೂಪರ್ ಲೀಗ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದಿದೆ.
ಭಾರತದ ಇನ್ನಿಂಗ್ಸ್: ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಆರಂಭಿಕ ಆಟಗಾರರು ಜವಾಬ್ದಾರಿಯುತ ಆಟವಾಡಿದರು. ಎದುರಾಳಿಗೆ ವಿಕೆಟ್ ನೀಡದೇ ಆಂಗ್ಕ್ರಿಶ್ ರಘುವಂಶಿ ಮತ್ತು ಹರ್ನೂರ್ ಸಿಂಗ್ ಜೊತೆಗೂಡಿ 25.4 ಓವರ್ಗಳಿಗೆ 164 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದರು. ಬಳಿಕ 79 ರನ್ ಕೊಳ್ಳೆಹೊಡೆದ ರಘುವಂಶಿ ಜೇಮೀ ಫೋರ್ಬ್ಸ್ ಬೌಲಿಂಗ್ನಲ್ಲಿ ಕೀಪರ್ ಕ್ಯಾಚ್ ನೀಡಿ ಔಟಾದರು.
ಇನ್ನು ಹರ್ನೂರ್ ಸಿಂಗ್ಗೆ ರಾಜ್ ಬಾವಾ ಜೊತೆಯಾದರು. ಈ ಇಬ್ಬರು ಆಟಗಾರರು 31 ರನ್ಗಳನ್ನು ಕಲೆ ಹಾಕಿದರು. ಬಳಿಕ 88 ರನ್ಗಳಿಸಿದ ಹರ್ನೂರ್ ಸಿಂಗ್ ಮ್ಯಾಥ್ಯೂ ಹಂಫ್ರೀಸ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಆದರು. ಕೊನೆಯಲ್ಲಿ ರಾಜವರ್ಧನ್ ಹಂಗರಗೇಕರ್ ಬ್ಯಾಟಿಂಗ್ ಅದ್ಭುತವಾಗಿತ್ತು. 17 ಎಸೆತದಲ್ಲಿ 5 ಸಿಕ್ಸ್ ಮತ್ತು 1 ಬೌಂಡರಿ ಬಾರಿಸುವ ಮೂಲಕ 39 ರನ್ಗಳನ್ನು ಕಲೆ ಹಾಕಿದರು.
ಓದಿ: ICC U19 WC: ಭಾರತದ ನಾಯಕ, ಉಪ ನಾಯಕನಿಗೆ ಕೊರೊನಾ ದೃಢ
ಹೀಗೆ ಭಾರತ ತಂಡದ ಪರ ರಘುವಂಶಿ 79 ರನ್, ಹರ್ನೂರ್ ಸಿಂಗ್ 88 ರನ್, ರಾಜ್ ಬಾವಾ 42 ರನ್, ನಾಯಕ ನಿಶಾಂತ್ ಸಿಂಧು 36 ರನ್, ಕೌಶಲ್ ತಾಂಬೆ 5, ದಿನೇಶ ಬಣ 1 ರನ್ ಮತ್ತು ರಾಜವರ್ಧನ್ ಹಂಗರಗೇಕರ್ 39 ರನ್ಗಳನ್ನು ಕಲೆ ಹಾಕಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಫಲರಾದರು.
50 ಓವರ್ಗೆ ಭಾರತ ತಂಡ 5 ವಿಕೆಟ್ ನಷ್ಟಕ್ಕೆ 307 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಐರ್ಲೆಂಡ್ ಪರ ಮುಜಾಮಿಲ್ ಶೆರ್ಜಾದ್ ಮೂರು ವಿಕೆಟ್ಗಳನ್ನು ಪಡೆದು ಮಿಂಚಿದರು.
ಐರ್ಲೆಂಡ್ ಇನ್ನಿಂಗ್ಸ್: ಭಾರತ ತಂಡ ನೀಡಿದ ಗುರಿ ಬೆನ್ನಟ್ಟಿದ ಐರ್ಲೆಂಡ್ ಆರಂಭದಿಂದಲೇ ತತ್ತರಿಸುತ್ತಾ ಹೋಯ್ತು. ಐರ್ಲೆಂಡ್ ತಂಡದ ಆಟಗಾರರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೇ ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಹಾದಿ ಹಿಡಿದರು.
ಐರ್ಲೆಂಡ್ ಪರ ಲಿಯಾಮ್ ಡೊಹೆರ್ಟಿ 7 ರನ್, ಡೇವಿಡ್ ವಿನ್ಸೆಂಟ್ 8 ರನ್, ಜ್ಯಾಕ್ ಡಿಕ್ಸನ್ 0, ಜೋಶುವಾ ಕಾಕ್ಸ್ (ವಿ.ಕೀ) 28 ರನ್, ನಾಯಕ ಟಿಮ್ ಟೆಕ್ಟರ್ 15 ರನ್, ಫಿಲಿಪ್ಪಸ್ ಲೆ ರೂಕ್ಸ್ 3 ರನ್, ಸ್ಕಾಟ್ ಮ್ಯಾಕ್‌ಬೆತ್ 32 ರನ್, ನಾಥನ್ ಮೆಕ್‌ಗುಯಿರ್ 14 ರನ್, ಮ್ಯಾಥ್ಯೂ ಹಂಫ್ರೀಸ್ (ಅಜೇಯ) 16 ರನ್, ಜೇಮೀ ಫೋರ್ಬ್ಸ್ 3, ಮುಜಾಮಿಲ್ ಶೆರ್ಜಾದ್ 1 ರನ್ ಬಾರಿಸುವ ಮೂಲಕ 133 ರನ್ಗಳನ್ನು ಕಲೆ ಹಾಕಿ ಭಾರತದ ವಿರುದ್ಧ 174 ರನ್‌ಗಳ ಸೋಲು ಕಂಡಿತು.
ಓದಿ: Pro Kabaddi: ಸೀಸನ್ನಲ್ಲಿ ಮೊದಲ ಗೆಲುವು ಕಂಡ ತೆಲುಗು ಟೈಟಾನ್ಸ್, ಪ್ಯಾಂಥರ್ಸ್ಗೆ ಸೋಲು
ಭಾರತದ ಪರ ಗರ್ವ್ ಸಾಂಗ್ವಾನ್, ಅನೀಶ್ವರ್ ಗೌತಮ್, ಕೌಶಲ್ ತಾಂಬೆ ತಲಾ ಎರಡೆರಡು ವಿಕೆಟ್ ಪಡೆದು ಮಿಂಚಿದರು. ರಾಜವರ್ಧನ್ ಹಂಗರ್ಗೇಕರ್, ರವಿ ಕುಮಾರ್, ವಿಕ್ಕಿ ಓಸ್ತ್ವಾಲ್ ತಲಾ ಒಂದೊಂದು ವಿಕೆಟ್ ಪಡೆದು ಗೆಲುವಿಗೆ ಆಸರೆಯಾದರು.
ಆರು ಆಟಗಾರರಿಗೆ ಕೊರೊನಾ: ಭಾರತ ಅಂಡರ್ 19 ನಾಯಕ ಯಶ್ ಧುಲ್ ಮತ್ತು ಎಸ್.ಕೆ ರಶೀದ್ ಸೇರಿದಂತೆ ಆರು ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರನ್ನು ಈಗ ಪ್ರತ್ಯೇಕವಾಗಿ ಇರಿಸಲಾಗಿದೆ. ಹೀಗಾಗಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಿಶಾಂತ್ ಸಿಧು ಭಾರತ ತಂಡವನ್ನು ಮುನ್ನಡೆಸಿದರು. ಭಾರತವು ಶನಿವಾರದಂದು ತನ್ನ ಕೊನೆಯ ಗುಂಪಿನ ಬಿ ಪಂದ್ಯದಲ್ಲಿ ಉಗಾಂಡ ತಂಡವನ್ನು ಎದುರಿಸಲಿದೆ.