ಮುಂಬೈ : ಭಾರತೀಯ ಟೆಸ್ಟ್ ತಂಡದ ಆರಂಭಿಕ ಆಟಗಾರ, ಕನ್ನಡಿಗ ಮಯಾಂಕ್ ಅಗರವಾಲ್ ಸೇರಿದಂತೆ ಮೂವರು ಪ್ಲೇಯರ್ಸ್ ಡಿಸೆಂಬರ್ ತಿಂಗಳ ಐಸಿಸಿ ಪುರುಷರ ಕ್ರಿಕೆಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಐಸಿಸಿ ಪ್ರತಿ ತಿಂಗಳು ನೀಡುವ 'ತಿಂಗಳ ಆಟಗಾರ ಪ್ರಶಸ್ತಿ' ರೇಸ್ನಲ್ಲಿ ಕನ್ನಡಿಗ, ಟೀಂ ಇಂಡಿಯಾ ಆರಂಭಿಕ ಮಯಾಂಕ್ ಅಗರ್ವಾಲ್ ಹೆಸರು ನಾಮನಿರ್ದೇಶನಗೊಂಡಿದೆ. ಬಹುತೇಕ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.
ಕನ್ನಡಿಗ ಮಯಾಂಕ್ ಅಗರವಾಲ್ ಜೊತೆಗೆ ನ್ಯೂಜಿಲ್ಯಾಂಡ್ನ ಸ್ಪಿನ್ನರ್ ಅಜಾಜ್ ಪಟೇಲ್ ಹಾಗೂ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಹೆಸರು ನಾಮನಿರ್ದೇಶನಗೊಂಡಿದೆ.
ಕಳೆದ ಕೆಲ ತಿಂಗಳಿಂದ ಟೀಂ ಇಂಡಿಯಾ ಟೆಸ್ಟ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಮಯಾಂಕ್ ಅಗರವಾಲ್, ನ್ಯೂಜಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಜೊತೆಗೆ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.
ನ್ಯೂಜಿಲ್ಯಾಂಡ್ ತಂಡದ ಸ್ಪಿನ್ನರ್ ಅಜಾಜ್ ಪಟೇಲ್ ಇನ್ನಿಂಗ್ಸ್ವೊಂದರಲ್ಲಿ ಟೀಂ ಇಂಡಿಯಾದ 10 ವಿಕೆಟ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದು, ಅವರ ಹೆಸರನ್ನ ಶಿಫಾರಸು ಮಾಡಲಾಗಿದೆ.
ಇದನ್ನೂ ಓದಿರಿ: ಪಾಕ್ ವೇಗಿಗೆ 'CSK shirt' ಉಡುಗೊರೆ ನೀಡಿದ ಧೋನಿ: ಮಾಹಿ ಪ್ರೀತಿಗೆ ಧನ್ಯವಾದ ಹೇಳಿದ ಹ್ಯಾರಿಸ್
ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ಆರಂಭಗೊಂಡಿರುವ ಆಶಸ್ ಸರಣಿಯಲ್ಲಿ ಕಾಂಗರೂ ಪಡೆಯ ವೇಗಿ ಮಿಚೆಲ್ ಸ್ಟಾರ್ಕ್ ಮಾರಕ ಬೌಲಿಂಗ್ ಪ್ರದರ್ಶನ ನೀಡಿ, ತಂಡ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.
ಟೀಂ ಇಂಡಿಯಾದ ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಹಾಗೂ ಮತ್ತೋರ್ವ ಕನ್ನಡಿಗ ಕೆ ಎಲ್ ರಾಹುಲ್ ಕೆಲ ಪಂದ್ಯಗಳಿಂದ ಹೊರಗುಳಿದಿರುವ ಕಾರಣ ನಾಮನಿರ್ದೇಶನಗೊಳ್ಳುವುದರಿಂದ ಹಿಂದೆ ಬಿದ್ದಿದ್ದಾರೆ.
ಸಿಕ್ಕ ಅವಕಾಶ ಪಡೆದುಕೊಂಡು ಮಿಂಚಿರುವ ಮಯಾಂಕ್ ಹೆಸರು ಶಿಫಾರಸುಗೊಂಡಿದೆ. ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಕನ್ನಡಿಗ ಮಯಾಂಕ್ ಅಗರವಾಲ್ ಸದ್ಯ 11ನೇ ಸ್ಥಾನದಲ್ಲಿದ್ದಾರೆ.