ಹೈದರಾಬಾದ್: ಎಡಗೈ ಆಟಗಾರ ಮೈಕೆಲ್ ಬ್ರೇಸ್ವೆಲ್(140 ರನ್, 78 ಎಸೆತ) ಅಬ್ಬರದ ಹೋರಾಟದ ನಡುವೆಯೂ ಕೂಡ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 12 ರನ್ಗಳ ಜಯದ ನಗೆ ಬೀರಿದೆ. 350 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಕಿವೀಸ್ಗೆ ಬ್ರೇಸ್ವೆಲ್ ಶತಕ ಸಿಡಿಸಿ ಗೆಲುವಿನ ಭರವಸೆ ಮೂಡಿಸಿದ್ದರೂ ಸಹ, ಅಂತಿಮವಾಗಿ ಔಟಾಗುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
350 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಆರಂಬ ಉತ್ತಮವಾಗಿರಲಿಲ್ಲ. 28 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಡೆವೊನ್ ಕಾನ್ವೆ 10 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಮತ್ತೋರ್ವ ಆರಂಭಿಕ ಆಟಗಾರ ಫಿನ್ ಅಲೆನ್ ಕೆಲ ಅದ್ಭುತ ಹೊಡೆತಗಳನ್ನು ಬಾರಿಸಿ ಭರವಸೆ ಮೂಡಿಸಿದರೂ ಸಹ 40 ರನ್ ಗಳಿಸಿ ಔಟಾದರು. ಅಲೆನ್ ವಿಕೆಟ್ ಪತನದ ಬಳಿಕ ಕಿವೀಸ್ ಇನ್ನಿಂಗ್ಸ್ ನಿಧಾನ ಗತಿಯತ್ತ ಸಾಗಿತು. ಅಲ್ಲದೆ, ನಿರಂತರವಾಗಿ ವಿಕೆಟ್ ಕಬಳಿಸಿದ ಭಾರತದ ಬೌಲರ್ಗಳು ನ್ಯೂಜಿಲ್ಯಾಂಡ್ ತಂಡದ ಮೇಲೆ ಒತ್ತಡ ಹೇರಿದ್ದರು. 131 ರನ್ಗೆ 6 ವಿಕೆಟ್ ಕಳೆದುಕೊಂಡಾಗ ಭಾರತ ಸುಲಭ ಜಯ ಸಾಧಿಸುವತ್ತ ಸಾಗಿತ್ತು. ಅಷ್ಟರಲ್ಲಾಗಲೇ ನಾಯಕ ಟಾಮ್ ಲ್ಯಾಥಮ್(24) ಸೇರಿದಂತೆ, ಹೆನ್ರಿ ನಿಕೋಲ್ಸ್(18), ಡೇರಿಲ್ ಮಿಚೆಲ್(9) ಹಾಗೂ ಯುವ ಆಟಗಾರ ಗ್ಲೆನ್ ಫಿಲಿಪ್ಸ್ 11 ರನ್ಗೆ ವಿಕೆಟ್ ಒಪ್ಪಿಸಿದ್ದರು.
-
Michael Bracewell's heroic innings goes in vain as India edge the Kiwis in a high-scoring ODI in Hyderabad 🤯#INDvNZ | 📝: https://t.co/raJtMjMaEn pic.twitter.com/S3TU8hLGMr
— ICC (@ICC) January 18, 2023 " class="align-text-top noRightClick twitterSection" data="
">Michael Bracewell's heroic innings goes in vain as India edge the Kiwis in a high-scoring ODI in Hyderabad 🤯#INDvNZ | 📝: https://t.co/raJtMjMaEn pic.twitter.com/S3TU8hLGMr
— ICC (@ICC) January 18, 2023Michael Bracewell's heroic innings goes in vain as India edge the Kiwis in a high-scoring ODI in Hyderabad 🤯#INDvNZ | 📝: https://t.co/raJtMjMaEn pic.twitter.com/S3TU8hLGMr
— ICC (@ICC) January 18, 2023
ಆದರೆ, ಬಳಿಕ ಒಂದಾದ ಮೈಕೆಲ್ ಬ್ರೇಸ್ವೆಲ್ ಅಬ್ಬರದ ಶತಕ (140) ಹಾಗೂ ಉಪಯುಕ್ತ ಬ್ಯಾಟಿಂಗ್ ಕಾಣಿಕೆ ನೀಡಿದ ಮಿಚೆಲ್ ಸ್ಯಾಂಟ್ನರ್(57) ಅರ್ಧಶತಕ ಬಾರಿಸಿ ತಂಡಕ್ಕೆ ಗೆಲುವಿನ ಆಸೆ ಚಿಗುರುವಂತೆ ಮಾಡಿದರು. ಭಾರತದ ಬೌಲರ್ಗಳನ್ನು ಲೀಲಾಜಾಲವಾಗಿ ದಂಡಿಸಿದ ಈ ಜೋಡಿ ಏಳನೇ ವಿಕೆಟ್ಗೆ 162 ರನ್ ಪೇರಿಸಿತು. ಸ್ಯಾಂಟ್ನರ್ 45 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 57 ರನ್ ಬಾರಿಸಿ ತಂಡದ ಮೊತ್ತ 293 ರನ್ ಆಗಿದ್ದಾಗ ಸಿರಾಜ್ ಬೌಲಿಂಗ್ನಲ್ಲಿ ಔಟಾದರು.
ಇನ್ನೊಂದು ತುದಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ ಮೈಕೆಲ್ ಬ್ರೇಸ್ವೆಲ್ ವೃತ್ತಿ ಜೀವನದ ಎರಡನೇ ಶತಕ ಗಳಿಸಿದರು. 57 ಎಸೆತಗಳಲ್ಲೇ ಮೂರಂಕಿ ಮೊತ್ತ ತಲುಪಿರುವುದು ವಿಶೇಷವಾಗಿತ್ತು. ಈ ಮೂಲಕ ಕಿವೀಸ್ ಪರ ಮೂರನೇ ಅತಿವೇಗದ ಶತಕ ಇದಾಗಿದೆ. ಭಾರತದ ಬೌಲಿಂಗ್ ದಾಳಿಯನ್ನು ಮನಬಂದಂತೆ ಚಚ್ಚಿದ ಬ್ರೇಸ್ವೆಲ್ 12 ಬೌಂಡರಿ ಹಾಗೂ 10 ಸಿಕ್ಸರ್ ಸಿಡಿಸಿದರು. ಇನ್ನೇನು ತಂಡವನ್ನು ಗೆಲುವಿನ ದಡ ಸೇರಿಸಿಯೇ ಬಿಟ್ಟರು ಎನ್ನುವಷ್ಟರಲ್ಲಿ ಶಾರ್ದುಲ್ ಎಸೆದ 49ನೇ ಓವರ್ನ 2ನೇ ಎಸೆತದಲ್ಲಿ ಎಡವಿದ ಬ್ರೇಸ್ವೆಲ್ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಇದರೊಂದಿಗೆ 49.2 ಓವರ್ಗಳಲ್ಲಿ ಆಲೌಟ್ ಆದ ನ್ಯೂಜಿಲ್ಯಾಂಡ್ ತಂಡ 12 ರನ್ ಅಂತರದ ಸೋಲು ಕಂಡಿದೆ. ಈ ಮೂಲಕ ರೋಹಿತ್ ಶರ್ಮಾ ಪಡೆ 349 ರನ್ಗಳ ಬೃಹತ್ ಮೊತ್ತ ದಾಖಲಿಸಿಯೂ ಅಲ್ಪ ಅಂತರ ಗೆಲುವು ಸಾಧಿಸಿ ನಿಟ್ಟುಸಿರು ಬಿಟ್ಟಿತು.
ಶುಭಮನ್ ದ್ವಿಶತಕ: ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಭಾರತ ಶುಭಮನ್ ಗಿಲ್(208, 149 ಎಸೆತ) ಅಬ್ಬರದ ದ್ವಿಶತಕದ ನೆರವಿನಿಂದ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 349 ರನ್ ಪೇರಿಸಿತ್ತು. ಭಾರತದ ಪರ ನಾಯಕ ರೋಹಿತ್ ಶರ್ಮಾ 40 ರನ್ ಗಳಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 31 ರನ್ ಹಾಗೂ ಹಾರ್ದಿಕ್ ಪಾಂಡ್ಯ 38 ಬಾಲ್ಗಳಲ್ಲಿ 28 ರನ್ ಬಾರಿಸಿ ಗಿಲ್ಗೆ ಸಾಥ್ ನೀಡಿದ್ದರು. ಫರ್ಗ್ಯುಸನ್ ಎಸೆದ 49ನೇ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ದ್ವಿಶತಕದ ಮೈಲಿಗಲ್ಲು ತಲುಪಿ ಸಂಭ್ರಮಿಸಿದರು. ಈ ಸಾಧನೆ ಮಾಡಿದ ವಿಶ್ವದ ಅತಿ ಕಿರಿಯ ಆಟಗಾರ ಎಂಬ ಶ್ರೇಯಕ್ಕೆ ಗಿಲ್ ಪಾತ್ರರಾದರು.
ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ. ಎರಡನೇ ಪಂದ್ಯವು ಜನವರಿ 21ರಂದು ರಾಯ್ಪುರದಲ್ಲಿ ನಡೆಯಲಿದೆ.
ಇದನ್ನೂ ಓದಿ: ಸಚಿನ್, ಕೊಹ್ಲಿ ದಾಖಲೆ ಮುರಿದ ದ್ವಿಶತಕ ವೀರ: ಇನ್ನೂರರ ಗಡಿ ಮುಟ್ಟಿದ ಅತ್ಯಂತ ಕಿರಿಯ ಗಿಲ್