ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ 2ನೇ ಪಂದ್ಯ ಮಳೆಗೆ ಆಹುತಿಯಾಗಿದೆ. ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯಕ್ಕೆ ಪದೇ ಪದೆ ಮಳೆ ಅಡ್ಡಿಪಡಿಸಿದ ಕಾರಣ ರದ್ದುಗೊಳಿಸಲಾಗಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಕ್ಷೇತ್ರರಕ್ಷಣೆ ಆಯ್ದುಕೊಂಡಿದ್ದರು. ಆದರೆ ಪಂದ್ಯ ಆರಂಭವಾಗಿ ನಾಲ್ಕು ಓವರ್‌ಗಳಲ್ಲೇ ವರುಣನ ಆಗಮನವಾಯಿತು. ಹೀಗಾಗಿ, ಆಟವನ್ನು ಕೆಲಕಾಲ ಸ್ಥಗಿತಗೊಳಿಸಿ ಬಳಿಕ 29 ಓವರ್ಗಳಿಗೆ ಮಾತ್ರ ಸೀಮಿತಗೊಳಿಸಿ ಮುಂದುವರೆಸಲು ಅಂಪೈರ್ಗಳು ನಿರ್ಧರಿಸಿದರು.
ಮತ್ತೆ ಬ್ಯಾಟಿಂಗ್ ಮುಂದುವರೆಸಿದ ಭಾರತ ತಂಡ 5ನೇ ಓವರ್ನಲ್ಲಿ ಮೊದಲ ಎಸೆತದಲ್ಲಿ 3 ರನ್ ಗಳಿಸಿದ್ದ ನಾಯಕ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಬಳಿಕ ಒಂದಾದ ಯುವ ಬ್ಯಾಟರ್ ಶುಭಮನ್ ಗಿಲ್ ಹಾಗೂ ಉತ್ತಮ ಲಯದಲ್ಲಿರುವ ಸೂರ್ಯಕುಮಾರ್ ಯಾದವ್ ಕಿವೀಸ್ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಎರಡನೇ ವಿಕೆಟ್ಗೆ ಇವರಿಬ್ಬರೂ 66 ರನ್ ಸೇರಿಸಿ ಉತ್ತಮ ಮೊತ್ತ ದಾಖಲಿಸುವ ಭರವಸೆ ಮೂಡಿಸಿದ್ದರು.
ಆದರೆ 12.5 ಓವರ್ಗಳಲ್ಲಿ ಭಾರತ 89 ರನ್ ಗಳಿಸಿದ್ದಾಗ ಮತ್ತೆ ಮಳೆ ಆರಂಭವಾಯಿತು. ಇದರಿಂದ ಮತ್ತೆ ಪಂದ್ಯಕ್ಕೆ ಅಡ್ಡಿಯಾಯಿತಲ್ಲದೆ, ವರುಣನ ಆರ್ಭಟ ಮುಂದುವರೆದ ಕಾರಣ ಮ್ಯಾಚ್ ರದ್ದುಪಡಿಸುವ ನಿರ್ಧಾರ ಪ್ರಕಟಿಸಲಾಯಿತು. ಹೀಗಾಗಿ ಈ ಪಂದ್ಯವನ್ನು ಗೆದ್ದು ಸರಣಿ ಸಮಬಲ ಸಾಧಿಸುವ ಭಾರತ ತಂಡದ ಗುರಿ ಈಡೇರಲಿಲ್ಲ.
ಸರಣಿಯ ನಿರ್ಣಾಯಕ ಹಾಗೂ ಅಂತಿಮ ಪಂದ್ಯವು ನವೆಂಬರ್ 30ರಂದು ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯಲಿದೆ. ಅಲ್ಲಿ ಭಾರತ ತಂಡ ಗೆದ್ದರೆ ಸರಣಿ ಸಮಬಲವಾಗಲಿದ್ದು, ಸೋತರೆ ಕಿವೀಸ್ ಪಾಲಾಗಲಿದೆ.
ಇದನ್ನೂ ಓದಿ: ಫಿಫಾ ವಿಶ್ವಕಪ್: ಡೆನ್ಮಾರ್ಕ್ ಸೋಲಿಸಿ ನಾಕೌಟ್ ತಲುಪಿದ ಮೊದಲ ತಂಡ ಫ್ರಾನ್ಸ್