ಕೇಪ್ಟೌನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ನಡೆಯುತ್ತಿರುವ 3 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಇಂದು ಕೇಪ್ಟೌನ್ನಲ್ಲಿ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಗೆಲ್ಲುವ ನಿರೀಕ್ಷೆಯೊಂದಿಗೆ ಪ್ರವಾಸ ಕೈಗೊಂಡಿರುವ ಭಾರತಕ್ಕೆ ಸೆಂಚೂರಿಯನ್ ಗೆಲುವು ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತ್ತು.
ಬಳಿಕ ಜೊಹಾನ್ಸ್ಬರ್ಗ್ನಲ್ಲಿ ನಡೆದ 2ನೇ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಕೆಚ್ಚೆದೆಯ ಆಟವಾಡಿ ಗೆಲ್ಲುವ ಮೂಲಕ ಸರಣಿಯನ್ನು 1-1 ರಲ್ಲಿ ಸಮಬಲ ಮಾಡಿಕೊಂಡಿತು. ಇದೀಗ 3ನೇ ಮತ್ತು ಸರಣಿಯ ಕೊನೆಯ ಟೆಸ್ಟ್ ಪಂದ್ಯ ಕೇಪ್ಟೌನ್ನ ನ್ಯೂಲ್ಯಾಂಡ್ ಸ್ಟೇಡಿಯಂನಲ್ಲಿ ಇಂದು ನಡೆಯಲಿದೆ.
ಈ ಮೈದಾನದಲ್ಲಿ ಭಾರತ ತಾನಾಡಿರುವ 5 ಪಂದ್ಯಗಳಲ್ಲಿ 3 ಸೋತು 2ರಲ್ಲಿ ಡ್ರಾ ಸಾಧಿಸಿದೆ. ಈ ಮೂಲಕ ಗೆಲುವೇ ಕಾಣದ ಮೈದಾನದಲ್ಲಿ ಗೆದ್ದು ಸರಣಿ ಜಯದ ಜೊತೆಗೆ ಇತಿಹಾಸ ನಿರ್ಮಿಸುವ ತವಕದಲ್ಲಿದೆ ವಿರಾಟ್ ಕೊಹ್ಲಿ ಪಡೆ.
ತಂಡದ ಬಲ ಹೆಚ್ಚಿಸಿದ ವಿರಾಟ್ ಕಮ್ಬ್ಯಾಕ್
ಬೆನ್ನು ನೋವಿನಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ನಾಯಕ ವಿರಾಟ್ ಕೊಹ್ಲಿ 3ನೇ ಪಂದ್ಯಕ್ಕೆ ತಾನು ಫಿಟ್ ಎಂದು ಘೋಷಿಸಿದ್ದಾರೆ. ಇದರಿಂದ ತಂಡದ ಬ್ಯಾಟಿಂಗ್ ಬಲ ಹೆಚ್ಚಿದ್ದು, ಗಾಯಗೊಂಡಿರುವ ಸಿರಾಜ್ ಬದಲಿಗೆ ಅನುಭವಿ ಇಶಾಂತ್ ಶರ್ಮಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Pankaj Advani Tests Covid: ಸ್ನೂಕರ್ ಚಾಂಪಿಯನ್ ಪಂಕಜ್ ಅಡ್ವಾಣಿಗೆ ಕೋವಿಡ್ ಸೋಂಕು