ಮುಂಬೈ: ಸ್ಟಾರ್ ಆಟಗಾರರಿದ್ದರೂ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್15ನೇ ಆವೃತ್ತಿಯ ಐಪಿಎಲ್ನಲ್ಲಿ ವೈಫಲ್ಯ ಅನುಭವಿಸಿದೆ. ಈ ಕಾರಣದಿಂದ ಮುಂಬರುವ ಪಂದ್ಯಗಳಲ್ಲಿ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದಾಗಿ ಕೋಚ್ ಮಹೇಲಾ ಜಯವರ್ದನೆ ಮುನ್ಸೂಚನೆ ನೀಡಿದ್ದಾರೆ.
2013ರಿಂದ 2021ರ ವರೆಗೆ 7 ವರ್ಷಗಳಲ್ಲಿ 5 ಪ್ರಶಸ್ತಿ ಬಾಚಿಕೊಂಡಿದ್ದ ಮುಂಬೈ ಇಂಡಿಯನ್ಸ್ 2022ರಲ್ಲಿ ಒಂದೂ ಪಂದ್ಯ ಗೆಲ್ಲಲಾಗದೇ ಐಪಿಎಲ್ ಇತಿಹಾಸದಲ್ಲಿ ಸತತ 8 ಪಂದ್ಯಗಳನ್ನು ಸೋತ ಏಕೈಕ ತಂಡ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಭಾನುವಾರ ರಾತ್ರಿ ಪಂದ್ಯದ ನಂತರ ಮಾತನಾಡಿದ ಕೋಚ್ ಜಯವರ್ದನೆ ತಂಡಕ್ಕೆ ಅಗತ್ಯ ಎನಿಸಿದರೆ ಬದಲಾವಣೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ಒಳ್ಳೆಯ ಪ್ರಶ್ನೆ, ನಾನು ಇದನ್ನು ವಿಮರ್ಷೆ ಮಾಡುವ ಅಗತ್ಯವಿದೆ ಮತ್ತು ಉಳಿದ ಕೊಚ್ಗಳ ಜೊತೆ ಚರ್ಚೆ ನಡೆಸಿ ಕೆಲವು ಯೋಜನೆಗಳನ್ನು ಮಾಡುತ್ತೇವೆ ಎಂದು ತಂಡ ಬ್ಯಾಟಿಂಗ್ ಲೈನ್ಅಪ್ನಲ್ಲಿ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
" ಬ್ಯಾಟಿಂಗ್ ನಮಗೆ ಸಮಸ್ಯೆಯಾಗಿದೆ, ವಿಶೇಷವಾಗಿ ಒಳ್ಳೆಯ ವಿಕೆಟ್ಗಳಲ್ಲೂ ನಾವು ತುಂಬಾ ಕೆಳಮಟ್ಟದಲ್ಲಿ ಬ್ಯಾಟಿಂಗ್ ಮಾಡಿದ್ದೇವೆ. ಮೊದಲು ಬ್ಯಾಟ್ ಮಾಡಲಿ ಅಥವಾ ಚೇಸಿಂಗ್ ಆಗಲಿ, ನಾವು ನಿಯಮಿತವಾಗಿ ಬ್ಯಾಟಿಂಗ್‌ನಲ್ಲಿ ಸಮಸ್ಯೆ ಎದುರಿಸುತ್ತಿದ್ದೇವೆ. ಇದು ಹಿಂದಿನ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಉತ್ತಮವಾಗಿ ಆಡಿರುವ ಹಿರಿಯ ಗುಂಪು ನಮ್ಮದು. ಆದರೂ ಬದಲಾವಣೆಗಳು ಅಗತ್ಯ ಎಂದಾದರೆ ನಾವು ಅವುಗಳನ್ನು ಮಾಡುತ್ತೇವೆ" ಎಂದು ಜಯವರ್ದನೆ ತಿಳಿಸಿದ್ದಾರೆ.
ಇಶಾನ್ ಕಿಶನ್ ಫಾರ್ಮ್ ಕುರಿತು ಮಾತನಾಡಿದ ಶ್ರೀಲಂಕಾದ ಮಾಜಿ ಕ್ರಿಕೆಟಿಗ, ಅವರು ಸ್ವಲ್ಪ ಕಷ್ಟಪಡುತ್ತಿದ್ದಾರೆ. ನಾವು ಅವರಿಗೆ ನೈಸರ್ಗಿಕ ಆಟ ಆಡುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಇಂದು ಆತನ ಜೊತೆಗೆ ಯಾವುದೇ ಮಾತನಾಡಿಲ್ಲ, ಆದರೆ, ಶೀಘ್ರದಲ್ಲೇ ಆತನೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಕಿಶನ್ ಅವರನ್ನು ಮುಂಬೈ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ 15.25 ಕೋಟಿ ರೂ ನೀಡಿ ಖರೀದಿಸಿತ್ತು. ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದ ಅವರು, ನಂತರದ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಇವರು ಮಾತ್ರವಲ್ಲದೇ, ನಾಯಕ ರೋಹಿತ್ ಮತ್ತು ಅನುಭವಿ ಪೊಲಾರ್ಡ್ ಕೂಡ ನಿರೀಕ್ಷಿತ ಪ್ರದರ್ಶನ ತೋರದಿರುವುದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಇದನ್ನೂ ಓದಿ: ಸಿಎಸ್ಕೆ ತಂಡಕ್ಕೆ ಏಪ್ರಿಲ್ 25 ಭಾರಿ ಅದೃಷ್ಟ.. 2010ರಿಂದ ಆಡಿರುವ ಎಲ್ಲ ಪಂದ್ಯಗಳಲ್ಲೂ ಜಯ!