ಕೋಲ್ಕತ್ತಾ: ಏಕದಿನ ವಿಶ್ವಕಪ್ (World Cup) ಸರಣಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ 3 ವಿಕೆಟ್ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶ ಮಾಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ, ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 213ರನ್ಗಳ ಗುರಿ ಬೆನ್ನಟ್ಟಿದ ಆಸೀಸ್ ಟ್ರಾವಿಸ್ ಹೆಡ್ (69), ಸ್ಟಿವೆನ್ ಸ್ಮಿತ್ (30), ಜೋಶ್ ಇಂಗ್ಲಿಸ್ (28) ಬ್ಯಾಟಿಂಗ್ ನೆರವಿನಿಂದ 47.2 ಓವರ್ಗಳಲ್ಲಿ ಗುರಿಯನ್ನು ತಲುಪುವ ಮೂಲಕ 3 ವಿಕೆಟ್ಗಳ ಗೆಲುವು ದಾಖಲಿಸಿದೆ. ಈ ಮೂಲಕ ವಿಶ್ವಕಪ್ ಸಮರದಲ್ಲಿ ಆಸೀಸ್ 8ನೇ ಬಾರಿಗೆ ಫೈನಲ್ ಪ್ರವೇಶ ಮಾಡಿದೆ.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹರಿಣ ಪಡೆ ಡೆವಿಡ್ ಮಿಲ್ಲರ್ ಶತಕದ ನೆರವಿನಿಂದ 49.4 ಓವರಗಳ ಅಂತ್ಯಕ್ಕೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 212 ರನ್ಗಳನ್ನು ಕಲೆ ಹಾಕಿ ಕಾಂಗರೂ ಪಡೆಗೆ ಸಾಧಾರಣ ಗುರಿ ನೀಡಿತ್ತು.
ಆಸೀಸ್ನ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕಾ ಕೇವಲ 24 ರನ್ಗಳಿಗೆ ತನ್ನ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕ ಬ್ಯಾಟರ್ಗಳಾದ ಕ್ವಿಂಟನ್ ಡಿ ಕಾಕ್(3), ಟೆಂಬಾ ಬವುಮಾ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (6), ಐಡೆನ್ ಮಾರ್ಕ್ರಾಮ್ (10) ಒಬ್ಬರಹಿಂದೊಬ್ಬರಂತೆ ವಿಕೆಟ್ಗಳನ್ನು ಒಪ್ಪಿಸಿ ಪೆವಿಲಿಯನ್ ಸೇರಿದರು. ಮತ್ತೊಂದೆಡೆ ಉತ್ತಮ ಪ್ರದರ್ಶನ ನೀಡುತ್ತಿದ್ದ ಹೆನ್ರಿಚ್ ಕ್ಲಾಸೇನ್(47) ಟ್ರಾವಿಸ್ ಹೆಡ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಹರಿಣ ಪಡೆ ಮತ್ತೊಮ್ಮೆ ಆಘಾತಕ್ಕೊಳಗಾಯಿತು.
ಈ ವೇಳೆ ತಂಡಕ್ಕೆ ಆಪದ್ಬಾಂಧವ ಆದ ಡೇವಿಡ್ ಮಿಲ್ಲರ್(101) ಆಸೀಸ್ ಬೌಲರ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಹರಿಣ ಪಡೆ 212 ರನ್ಗಳ ಕಲೆ ಹಾಕಿತು. ಆಸ್ಟೇಲಿಯಾ ಪರ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ತಲಾ 3, ಟ್ರಾವಿಸ್ ಹೆಡ್, ಜೋಶ್ ಹ್ಯಾಜಲ್‌ವುಡ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಭಾನುವಾರ ಭಾರತದ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಸಮರದ ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ.
ವಿಶ್ವಕಪ್ ಫೈನಲ್ಗೆ ಹೆಚ್ಚು ಬಾರಿ ಎಂಟ್ರಿಕೊಟ್ಟ ತಂಡಗಳು
- ಆಸ್ಟ್ರೇಲಿಯಾ - 8
- ಭಾರತ - 4
- ಇಂಗ್ಲೆಂಡ್ - 4
- ವೆಸ್ಟ್ ಇಂಡೀಸ್ - 3
- ಶ್ರೀಲಂಕಾ - 3
ವಿಶ್ವಕಪ್ ಆವೃತ್ತಿಯೊಂದರಲ್ಲೇ ಅತಿ ಹೆಚ್ಚು ಗೆಲುವು ದಾಖಲಿಸಿದ ತಂಡಗಳು
- 11 - ಆಸ್ಟ್ರೇಲಿಯಾ (2003)
- 11 - ಆಸ್ಟ್ರೇಲಿಯಾ (2007)
- 10 - ಭಾರತ (2023)
- 9 - ಭಾರತ (2003)
- 8 - ಶ್ರೀಲಂಕಾ (2007)
- 8 - ನ್ಯೂಜಿಲೆಂಡ್ (2015)
- 8 - ಆಸ್ಟ್ರೇಲಿಯಾ (2023)
ಇದನ್ನೂ ಓದಿ: ಪಿಚ್ ಬದಲಾವಣೆ ವಿವಾದ ತಳ್ಳಿಹಾಕಿದ ಕಿವೀಸ್ ನಾಯಕ; ಭಾರತ ತಂಡಕ್ಕೆ ಅಭಿನಂದಿಸಿದ ಕೇನ್ ವಿಲಿಯಮ್ಸನ್