ಲಾಹೋರ್(ಪಾಕಿಸ್ತಾನ): ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಸೆಮಿಫೈನಲ್ ಘಟ್ಟ ತಲುಪಿದೆ. ಇಂದು ಮೊದಲ ಹಣಾಹಣಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದ್ದು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ಲೀಗ್ ಹಂತದ ಎಲ್ಲ ಒಂಬತ್ತು ಪಂದ್ಯಗಳಲ್ಲಿ ಜಯಗಳಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಸೆಮೀಸ್‌ಗೆ ನಾಲ್ಕು ತಂಡಗಳು ಆಯ್ಕೆಯಾಗಿವೆ. ಭಾರತ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳಿವೆ. ಸೆಮೀಸ್ ಪ್ರವೇಶಿಸಲು ಹೋರಾಟ ನಡೆಸಿದ ಪಾಕ್‌ಗೆ ಅಂತಿಮ ಕ್ಷಣದಲ್ಲಿ ನಿರಾಸೆಯಾಗಿದೆ.
ಆರಂಭಿಕ ಪಂದ್ಯಗಳಲ್ಲಿ ಉತ್ತಮ ಮುನ್ನಡೆ ಪಡೆದಿದ್ದ ಪಾಕಿಸ್ತಾನ, ನಿರ್ಣಾಯಕ ಸಂದರ್ಭಗಳಲ್ಲಿ ಎಡವಿತು. ಬಳಿಕ ಸತತ ಸೋಲಿನ ಮೂಲಕ ಸೂಪರ್ ಫೋರ್ನಲ್ಲಿ ಸ್ಥಾನ ಪಡೆಯಲು ವಿಫಲವಾಯಿತು. ತಾನು ಆಡಿರುವ 9 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದು, 5ನೇ ಸ್ಥಾನಕ್ಕೆ ಕುಸಿದಿತ್ತು.
ಆಯ್ಕೆ ಸಮಿತಿ ವಜಾ: ನೀರಸ ಪ್ರದರ್ಶನದಿಂದ ಅಸಮಾಧಾನಗೊಂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇಡೀ ರಾಷ್ಟ್ರೀಯ ಆಯ್ಕೆ ಸಮಿತಿಯನ್ನೇ ವಜಾಗೊಳಿಸಿದೆ ಎಂದು ವರದಿಯಾಗಿದೆ. ಪ್ರತಿಷ್ಟಿತ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದರೂ, ಬಳಿಕ ಸತತ ಸೋಲಿನಿಂದ ತಂಡ ಟೂರ್ನಿಯಿಂದ ಹೊರಬಿತ್ತು. ಹೀಗಾಗಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಬಾಬರ್ ಅಜಂ ಅವರನ್ನು ವೈಟ್ ಬಾಲ್ (ಏಕದಿನ ಕ್ರಿಕೆಟ್) ನಾಯಕತ್ವದಿಂದ ತೆಗೆದು ಹಾಕಲಾಗುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಇದಕ್ಕೂ ಮುನ್ನ, ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್ ಉಲ್ ಹಕ್ ಅವರು ತಮ್ಮ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದರು. ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಕೂಡಾ ರಾಜೀನಾಮೆ ಸಲ್ಲಿಸಿದ್ದರು. ಇದೀಗ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್, ಮುಖ್ಯ ಕೋಚ್ ಗ್ರಾಂಟ್ ಬ್ರಾಡ್ ಬರ್ನ್, ಬ್ಯಾಟಿಂಗ್ ಕೋಚ್ ಆಂಡ್ರ್ಯೂ ಪುಟ್ಟಿಕ್ ಅವರನ್ನು ತೆಗೆಯಲಾಗುತ್ತದೆ ಎಂದು ಹೇಳಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ದೇಶೀಯ ಕೋಚ್ಗಳನ್ನು ನೇಮಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ತೆರವಾದ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಮಾಜಿ ನಾಯಕ ಮುಹಮ್ಮದ್ ಹಫೀಜ್ ಅವರ ಹೆಸರು ಮುಂಚೂಣಿಯಲ್ಲಿದೆ. ಸಮಿತಿಯಲ್ಲಿ ಮಾಜಿ ನಾಯಕ ಶಾಹಿದ್ ಆಫ್ರಿದಿ ಸೇರಿದಂತೆ ಮೊದಲಾದವರು ಇರುವ ಸಾಧ್ಯತೆ ಇದೆ. ಯೂನಿಸ್ ಖಾನ್ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಲಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ಪಾಕಿಸ್ತಾನ ಹಾಲಿ ಆಟಗಾರರಾದ ವಹಾಬ್ ರಿಯಾಜ್, ಸೊಹೈಲ್ ತನ್ವೀರ್ ಸೇರಿದಂತೆ ಇತರೆ ಮಾಜಿ ಆಟಗಾರರನ್ನು ಪಿಸಿಬಿಯ ಕ್ರಿಕೆಟ್ ನಿರ್ವಹಣಾ ಸಮಿತಿಯ ಮುಖ್ಯಸ್ಥ ಝಕಾ ಅಶ್ರಫ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ವಿಶ್ವಕಪ್ ಪ್ರದರ್ಶನದ ಬಗ್ಗೆ ಬುಧವಾರ (ಇಂದು) ಪಿಸಿಬಿ ಸಭೆ ಕರೆದಿದ್ದು, ಬಾಬರ್ ಅಜಂ ಕೂಡಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: IND vs NZ: ಸೆಮೀಸ್ ಸೇಡಿಗೆ ರೋಹಿತ್ ಪಡೆ ರೆಡಿ: ಮುಂದುವರೆಯುತ್ತಾ ಭಾರತದ ಅಜೇಯ ಓಟ?