ನವದೆಹಲಿ: ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಲಖನೌ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನಲ್ ಹಕ್ ನಡುವೆ ವಾಗ್ವಾದ ನಡೆದಿದ್ದು ಗೊತ್ತೇ ಇದೆ. ಆದರೆ, ವಿಶ್ವಕಪ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ (IND vs AFG) ನಡುವಿನ ಪಂದ್ಯದಲ್ಲಿ ಈ ಇಬ್ಬರೂ ಪರಸ್ಪರ ಅಭಿನಂದಿಸಿದರು. ಹಳೆಯ ಸಂಗತಿಗಳನ್ನು ಮರೆತು ಮಾತನಾಡುತ್ತಾ ಖುಷಿಪಟ್ಟರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್ ಉಲ್ ಹಕ್ ಮತ್ತು ಭಾರತದ ದಿಗ್ಗಜ ವಿರಾಟ್ ಕೊಹ್ಲಿ ನಡುವೆ ಇದ್ದ ವಿವಾದ ಅಂತ್ಯಗೊಂಡಿದೆ. ಬುಧವಾರ ಇಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ, ನವೀನ್ ಅವರನ್ನು ತಬ್ಬಿಕೊಂಡರು. ಈ ಮೂಲಕ ಪ್ರೇಕ್ಷಕರ ಮನ ಗೆದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನ ಕೊನೆಯ ಸೀಸನ್‌ನಲ್ಲಿ ಲಖನೌದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ವೇಳೆ ನವೀನ್ ಮತ್ತು ಕೊಹ್ಲಿ ನಡುವೆ ವಾಗ್ವಾದ ನಡೆದಿತ್ತು. ಈ ಪಂದ್ಯದಲ್ಲಿ ನವೀನ್ ಬ್ಯಾಟಿಂಗ್ ವೇಳೆ ಕೊಹ್ಲಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಪಂದ್ಯದ ನಂತರ ಅವರು ಕೊಹ್ಲಿಗೆ ಹಸ್ತಲಾಘವವನ್ನೂ ಸಹ ಮಾಡಿರಲಿಲ್ಲ.
ವಿಶ್ವಕಪ್ ಪಂದ್ಯದಲ್ಲಿ ಇಬ್ಬರೂ ಮುಖಾಮುಖಿಯಾದಾಗ ನವೀನ್ ಉಲ್ ಹಕ್ರನ್ನು ಕೊಹ್ಲಿ ಅಪ್ಪಿಕೊಂಡು ಅಭಿನಂದಿಸಿದರು. ಪಂದ್ಯದ ನಂತರ ಇಲ್ಲಿ ಮಾತನಾಡಿದ ನವೀನ್, 'ನನ್ನ ಮತ್ತು ಕೊಹ್ಲಿ ನಡುವೆ ಏನೇ ನಡೆದರೂ ಮೈದಾನದೊಳಗೆ ಇತ್ತು. ಕ್ಷೇತ್ರದ ಹೊರಗೆ ನಮ್ಮ ನಡುವೆ ಯಾವುದೇ ವಿವಾದ ಇರಲಿಲ್ಲ. ಜನರು ಮತ್ತು ಮಾಧ್ಯಮಗಳು ಅದನ್ನು ದೊಡ್ಡದಾಗಿ ಮಾಡಿದವು ಎಂದರು.
ನಾವು ಆ ವಿಷಯಗಳನ್ನು ಮರೆತುಬಿಡಬೇಕು ಎಂದು ಕೊಹ್ಲಿ ನನಗೆ ಹೇಳಿದರು. ಹೌದು, ಈ ವಿಷಯಗಳು ಈಗ ಮುಗಿದು ಹೋದ ಅಧ್ಯಾಯ ಎಂದು ನಾನು ಕೂಡ ಅವರಿಗೆ ಉತ್ತರಿಸಿದೆ. ವಿಶ್ವಕಪ್ ಪಂದ್ಯದಲ್ಲಿ ನವೀನ್ ಬ್ಯಾಟಿಂಗ್‌ಗೆ ಹೊರ ಬಂದಾಗ ಪ್ರೇಕ್ಷಕರು ‘ಕೊಹ್ಲಿ-ಕೊಹ್ಲಿ’ ಎಂದು ಜೈಕಾರ ಹಾಕತೊಡಗಿದರು. ನವೀನ್ ಬೌಲಿಂಗ್ ಮಾಡುವಾಗಲೂ ಅದೇ ಲುಕ್ ಕಾಣುತ್ತಿತ್ತು. ಕೊಹ್ಲಿ ಮತ್ತು ನವೀನ್ ಅಪ್ಪಿಕೊಂಡ ನಂತರ ಪ್ರೇಕ್ಷಕರು ಅಫ್ಘಾನಿಸ್ತಾನ ಆಟಗಾರನ ವಿರುದ್ಧ ಕೂಗುವುದನ್ನು ನಿಲ್ಲಿಸಿದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿ ಮಿಂಚಿದರು.
ಓದಿ: ಹಿಟ್ಮ್ಯಾನ್ ರೋಹಿತ್ ಶರ್ಮಾ ಹೆಸರಿನಲ್ಲಿ 'ನೂರಾರು' ದಾಖಲೆ: ಏನೆಲ್ಲಾ ಇಲ್ಲಿ ನೋಡಿ..