ಮುಂಬೈ (ಮಹಾರಾಷ್ಟ್ರ): ಸತತ 7 ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ, ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಮೊದಲ ತಂಡವಾಗಿದೆ. ನಾಯಕ ರೋಹಿತ್ ಶರ್ಮಾ ಬಳಗದ ಅತ್ಯುತ್ತಮ ಪ್ರದರ್ಶನದಿಂದ ನಾಕೌಟ್ ತಂಡ ಈ ಹಂತ ತಲುಪಿದೆ. ಪಂದ್ಯದ ಬಳಿಕ ಶರ್ಮಾ ತಮ್ಮ ಮನದಾಳದ ಮಾತುಗಳನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡರು.
"ನಾವು ಅಧಿಕೃತವಾಗಿ ಸೆಮಿಫೈನಲ್ ತಲುಪಿರುವುದಕ್ಕೆ ತುಂಬಾ ಖುಷಿಯಾಗಿದೆ. ಚೆನ್ನೈನಲ್ಲಿ ವಿಶ್ವಕಪ್ ಅಭಿಯಾನ ಪ್ರಾರಂಭಿಸಿದಾಗ ಮೊದಲು ಸೆಮಿಫೈನಲ್‌ಗೆ ಅರ್ಹತೆ ಪಡೆಯುವುದು, ನಂತರ ಫೈನಲ್‌ಗೆ ಅರ್ಹತೆ ಪಡೆಯುವ ಗುರಿ ನಮ್ಮದಾಗಿತ್ತು" ಎಂದರು.
"ನಾವು ಈ ಏಳು ಪಂದ್ಯಗಳನ್ನು ಆಡಿದ ರೀತಿ ತುಂಬಾ ಚೆನ್ನಾಗಿತ್ತು. ಇಲ್ಲಿಯವರೆಗೆ ನಡೆದ ಎಲ್ಲ ಪಂದ್ಯಗಳಲ್ಲಿ ಎಲ್ಲರೂ ತಮ್ಮ ಶಕ್ತಿ ಮೀರಿ ಪ್ರಯತ್ನ ತೋರಿದ್ದಾರೆ. ಪಂದ್ಯದಲ್ಲಿ ಹೆಚ್ಚು ರನ್ ಗಳಿಸಲು ಬಯಸಿದಾಗ ನಮಗೆ ಈ ರೀತಿಯ ಸ್ಪಿರಿಟ್ ಬೇಕು. ಯಾವುದೇ ಪಿಚ್‌ನಲ್ಲಿ 350 ರನ್ ಉತ್ತಮ ಸ್ಕೋರ್ ಆಗಿದೆ. ಇದರ ಕ್ರೆಡಿಟ್ ಬ್ಯಾಟಿಂಗ್ ಘಟಕಕ್ಕೆ ಸಲ್ಲುತ್ತದೆ" ಎಂದು ಹೇಳಿದರು.
ತಮ್ಮ ಬ್ಯಾಟರ್‌ಗಳನ್ನು ಶ್ಲಾಘಿಸುವ ಜೊತೆಗೆ 56 ಎಸೆತಗಳಲ್ಲಿ 82 ರನ್ ಗಳಿಸಿದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಶರ್ಮಾ ವಿಶೇಷವಾಗಿ ಪ್ರಶಂಸಿಸಿದರು. "ಶ್ರೇಯಸ್ ಮಾನಸಿಕವಾಗಿ ತುಂಬಾ ಬಲಶಾಲಿ ಆಟಗಾರ. ತನ್ನ ಜವಾಬ್ದಾರಿಯನ್ನು ನಿಖರವಾಗಿ ನಿಭಾಯಿಸಿದರು. ಅದನ್ನೇ ನಾವು ಅವರಿಂದ ನಿರೀಕ್ಷಿಸುತ್ತೇವೆ. ಯಾವುದೇ ಸವಾಲನ್ನು ಎದುರಿಸಲು ಸಿದ್ಧ ಎಂದು ತೋರಿಸಿಕೊಟ್ಟಿದ್ದಾರೆ" ಎಂದು ತಿಳಿಸಿದರು.
ಬೌಲರ್‌ಗಳು ಕೂಡ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಬ್ಯಾಟರ್‌ಗಳ ಪ್ರಯತ್ನಕ್ಕೆ ನೆರವಾದರು. ಎಲ್ಲಾ ರೀತಿಯ ಪರಿಸ್ಥಿತಿಗಳಲ್ಲಿ ತಮ್ಮ ಬೌಲರ್‌ಗಳ ಮೇಲುಗೈ ಪ್ರದರ್ಶನವನ್ನು ಕಂಡು ರೋಹಿತ್ ಸಂತೋಷಪಟ್ಟರು. "ಸಿರಾಜ್ ಒಬ್ಬ ಶ್ರೇಷ್ಠ ಬೌಲರ್. ಅವರು ನಮಗೆ ಮತ್ತೊಬ್ಬ ಗುಣಮಟ್ಟದ ಬೌಲರ್ ಎಂದು ತೋರಿಸಿದರು. ಹೊಸ ಬಾಲ್ನೊಂದಿಗೆ ಬೌಲಿಂಗ್ ಮಾಡುವಾಗ ಅವರ ಕೌಶಲ್ಯ ಅದ್ಭುತ" ಎಂದು ರೋಹಿತ್ ಮೆಚ್ಚುಗೆ ವ್ಯಕ್ತಪಡಿಸಿದರು.
"ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ನಿರಂತರ ಪ್ರದರ್ಶನಗಳು ನಮ್ಮ ವೇಗದ ಬೌಲರ್‌ಗಳ ಗುಣಮಟ್ಟ ಮತ್ತು ಪರಿಸ್ಥಿತಿಗಳು ಹೇಗಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅದೇನೇ ಇರಲಿ, ನಮ್ಮ ಬೌಲರ್‌ಗಳು ಅಪಾಯಕಾರಿ ಎಂದು ಸಾಬೀತುಪಡಿಸಿದ್ದಾರೆ. ಅವರು ತಮ್ಮ ಪ್ರದರ್ಶನವನ್ನು ಇದೇ ರೀತಿ ಮುಂದುವರಿಸುತ್ತಾರೆ ಎಂದು ಭಾವಿಸುತ್ತೇನೆ" ಎಂದು ಶರ್ಮಾ ಹೇಳಿದರು.
"ಮುಂದಿನ ನಮ್ಮ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿದೆ. ಸದ್ಯ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಅತ್ಯುತ್ತಮ ಫಾರ್ಮ್ನಲ್ಲಿದೆ. ಇದು ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ. ಕೋಲ್ಕತ್ತಾದ ಜನರು ಇದನ್ನು ಆನಂದಿಸಲಿದ್ದಾರೆ" ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.
ಭಾರತದ ಮುಂದಿನ ಪಂದ್ಯ ಸೌತ್ ಆಫ್ರಿಕಾ ವಿರುದ್ಧ ನವೆಂಬರ್ 5ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.
ಇದನ್ನೂ ಓದಿ: ಸಿಂಹಳೀಯರ ಗೆಲುವಿಗೆ ದುಸ್ವಪ್ನವಾದ ಶಮಿ: ಭಾರತ - ಶ್ರೀಲಂಕಾ 'ವಿಶ್ವ'ಸಮರದ ಚಿತ್ರಣಗಳು...