ಬೆಂಗಳೂರು: 2023ರ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಕಂಡಿತು. ಇದರೊಂದಿಗೆ ಸೆಮಿಸ್ ಬರ್ತ್ ಬಹುತೇಕ ಕನ್ಫರ್ಮ್ ಮಾಡಿಕೊಂಡಿದೆ. ಕಿವೀಸ್ ಆಟಗಾರ ರಚಿನ್ ರವೀಂದ್ರ ಈ ಟೂರ್ನಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ಬೌಲಿಂಗ್ನಲ್ಲಿ ಎರಡು ವಿಕೆಟ್ ಪಡೆದಿದ್ದ ರಚಿನ್ ಆಕ್ರಮಣಕಾರಿಯಾಗಿ 42 ರನ್ ಗಳಿಸಿದ್ದರು. ಇದಲ್ಲದೆ, ಮೊದಲ ಬಾರಿಗೆ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತಿರುವ ರಚಿನ್ ಅನೇಕ ದಾಖಲೆಗಳನ್ನು ಹೊಂದಿದ್ದಾರೆ. ಅದರಲ್ಲಿಯೂ ರಚಿನ್ 25 ವರ್ಷದೊಳಗಿನ ವಿಶ್ವಕಪ್ ಟೂರ್ನಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಸಚಿನ್ ದಾಖಲೆ ಹಿಂದಿಕ್ಕುವ ಮೂಲಕ ಇತಿಹಾಸ ಸೃಷ್ಟಿಸಿದರು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಅಭಿಮಾನಿಗಳ ಬಾಯಲ್ಲಿ ಹೆಸರು ಕೇಳುವುದೇ ಕನಸಿನಂತೆ ಭಾಸವಾಗುತ್ತಿದೆ ಎಂದು ರಚಿನ್ ಕಾಮೆಂಟ್ ಮಾಡಿದ್ದಾರೆ. ಅವರ ತಂದೆಯ ಸಂಬಂಧಿಕರು ಬೆಂಗಳೂರಿನಲ್ಲಿದ್ದಾರೆ ಎಂದು ತಿಳಿದುಬಂದಿದೆ.
ನನ್ನ ತಂದೆಯ ಸಂಬಂಧಿಕರಿರುವ ಬೆಂಗಳೂರಿನ ಮೈದಾನದಲ್ಲಿ ಪಂದ್ಯ ಆಡುತ್ತಿರುವುದು ನನಗೆ ಸಂತಸ ತಂದಿದೆ. ಇಲ್ಲಿನ ಅಭಿಮಾನಿಗಳಿಂದ ಈ ಮಟ್ಟದ ಬೆಂಬಲವನ್ನು ನಾನು ನಿರೀಕ್ಷಿಸಿರಲಿಲ್ಲ. ಇದೆಲ್ಲವೂ ನಂಬಲು ಸಾಧ್ಯವಾಗುತ್ತಿಲ್ಲ. ಸಚಿನ್ ಅವರು ಈ ದಾಖಲೆಯನ್ನು ಮೀರುತ್ತೇನೆ ಎಂದು ಕನಸಿನಲ್ಲೂ ಸಹ ಊಹಿಸಿರಲಿಲ್ಲ. ಕಳೆದ ಆರು ತಿಂಗಳಿಂದ ನಾನು ವಿಶ್ವಕಪ್ ಆಯ್ಕೆಯಲ್ಲಿ ಇರಲಿಲ್ಲ. ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಇಲ್ಲಿಗೆ ಬಂದಿದ್ದೇನೆ. ಟೆಸ್ಟ್ ಪಂದ್ಯವೊಂದರಲ್ಲಿ ಅಜಾಜ್ ಪಟೇಲ್ ಅವರ 10ನೇ ವಿಕೆಟ್ ಕ್ಯಾಚ್ ನನ್ನ ವೃತ್ತಿಜೀವನದಲ್ಲಿ ಅದ್ಭುತ ಕ್ಷಣವಾಗಿತ್ತು ಎಂದರು.
ಬೆಂಗಳೂರಿನ ಪಿಚ್ ಬೌಲಿಂಗ್ ಮತ್ತು ಬ್ಯಾಟಿಂಗ್‌ಗೆ ಅದ್ಭುತವಾಗಿದೆ. ಚಿಕ್ಕವನಿದ್ದಾಗ ಇಲ್ಲಿ ಅಭ್ಯಾಸ ಮಾಡಿದ ಅನುಭವ ಈಗ ಬೇಕು. ಐಪಿಎಲ್‌ನಲ್ಲಿ ಆಡಿದ ಕೇನ್, ಡಾವನ್ ಕಾನ್ವೆ ಅವರೊಂದಿಗೆ ಬೆಂಗಳೂರು ಪಿಚ್ ಬಗ್ಗೆ ಸಾಕಷ್ಟು ಚರ್ಚಿಸಿದ್ದೇನೆ. ನಮ್ಮ ನಾಯಕ ಕೇನ್ ವಿಲಿಯಮ್ಸನ್ ನನ್ನ ಮಾರ್ಗದರ್ಶಕರಾಗಿದ್ದಾರೆ. ಅವರಷ್ಟೇ ಅಲ್ಲ, ಈ ವಿಶ್ವಕಪ್‌ನಲ್ಲಿ ಅನೇಕ ಅತ್ಯುತ್ತಮ ಆಟಗಾರರಿದ್ದಾರೆ. ವಿರಾಟ್ ಕೊಹ್ಲಿ, ರೂಟ್, ಸ್ಟೀವ್ ಸ್ಮಿತ್ ಅವರಂತಹ ಅಗ್ರಮಾನ್ಯ ಆಟಗಾರರೊಂದಿಗೆ ಆಡುವ ಅನುಭವ ಅವರ್ಣನೀಯ. ಮುಕ್ತವಾಗಿ ಆಡಲು ನಮ್ಮ ತಂಡದ ಸಹ ಆಟಗಾರರಿಂದ ಯಾವಾಗಲೂ ಬೆಂಬಲವನ್ನು ಪಡೆಯುತ್ತೇನೆ. ನಮ್ಮ ಪಂದ್ಯ ವೀಕ್ಷಿಸಲು ಬಂದ ಪ್ರತಿಯೊಬ್ಬ ಅಭಿಮಾನಿಗಳಿಗೂ ನನ್ನ ಧನ್ಯವಾದಗಳು. ಖಂಡಿತವಾಗಿಯೂ ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದು ರಚಿನ್ ಹೇಳಿದರು.
ಇದನ್ನೂ ಓದಿ: ವಿಶ್ವಕಪ್ ಸೆಮಿ ಫೈನಲ್‌ನತ್ತ ಕಿವೀಸ್: ಪವಾಡ ನಡೆದರೆ ಮಾತ್ರ ಪಾಕ್ಗೆ ಚಾನ್ಸ್