ಪುಣೆ(ಮಹಾರಾಷ್ಟ್ರ): ಇಂದಿನ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಬೇಕಾದ್ರೆ ಇಂಗ್ಲೆಂಡ್ ತಂಡಕ್ಕೆ ಮುಂದಿನ ಎರಡು ಪಂದ್ಯಗಳ ಗೆಲುವು ಅನಿವಾರ್ಯವಾಗಿದೆ. ಇಂದು ನಡೆಯುವ ನೆದರ್ಲ್ಯಾಂಡ್ಸ್ ವಿರುದ್ಧ ಮತ್ತು ನವೆಂಬರ್ 11ರಂದು ನಡೆಯುವ ಪಾಕಿಸ್ತಾನ ವಿರುದ್ಧ ಗೆದ್ರೂ ಸಹಿತ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವುದು ಅಷ್ಟು ಸುಲಭದ ಮಾತಲ್ಲ.
ಹೌದು, ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂದು ನಡೆಯುವ ಪಂದ್ಯ ಬಹಳ ರೋಚಕದಿಂದ ಕೂಡಿದೆ. ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳ ಮಧ್ಯೆ ಬಿಗ್ ಫೈಟ್ ನಡೆಯಲಿದೆ. ಇಂದು ವಿಶ್ವಕಪ್ನಲ್ಲಿ ನಡೆಯುವ ಈ ಪಂದ್ಯ ಔಪಚಾರಿಕವಾಗಿದ್ರೂ ಸಹ ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ಗೆ ಮಹತ್ವದ್ದಾಗಿದೆ. ಏಕೆಂದ್ರೆ ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಗಿಟ್ಟಿಸಿಕೊಳ್ಳಬೇಕಾದ್ರೆ ಉಭಯ ತಂಡಗಳು ಈ ಪಂದ್ಯದಲ್ಲಿ ಗೆಲುವು ದಾಖಲಿಸಿವುದು ಮುಖ್ಯವಾಗಿದೆ.
ಲೀಗ್ ಹಂತದ ಪಾಯಿಂಟ್ ಪಟ್ಟಿಯಲ್ಲಿ ನೆದರ್ಲ್ಯಾಂಡ್ಸ್ ತಂಡ 9ನೇ ಸ್ಥಾನ ಮತ್ತು ಇಂಗ್ಲೆಂಡ್ ತಂಡ 10ನೇ ಸ್ಥಾನವನ್ನು ಅಲಂಕರಿಸಿವೆ. 2025ರ ಚಾಂಪಿಯನ್ಸ್ ಟ್ರೋಫಿಗೆ ಪ್ರಸ್ತುತ ನಡೆಯುತ್ತಿರುವ 2023ರ ವಿಶ್ವಕಪ್ನ ಲೀಗ್ ಹಂತದ ಅಂಕಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಲೀಗ್ ಪಂದ್ಯಗಳು ಮುಗಿದ ನಂತರ ಟಾಪ್ 7 ಸ್ಥಾನದಲ್ಲಿರುವ ತಂಡಗಳು ಮತ್ತು ಆತಿಥೇಯ ಪಾಕಿಸ್ತಾನ ಸ್ಪರ್ಧಿಸಲಿದೆ. ಸದ್ಯ ಲೀಗ್ ಹಂತದ ಪಾಯಿಂಟ್ ಪಟ್ಟಿಯ 8ರ ಘಟ್ಟದಲ್ಲಿ ಸ್ಥಾನ ಪಡೆಯಲು ಉಭಯ ತಂಡಗಳು ಬಹಳಷ್ಟು ಕಸರತ್ತು ನಡೆಸಿವೆ. ಒಂದು ವೇಳೆ ಈ ಪಂದ್ಯವನ್ನು ನೆದರ್ಲ್ಯಾಂಡ್ಸ್ ತಂಡ ಗೆದ್ರೆ ಬಹುತೇಕ ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದುಕೊಳ್ಳಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಡಚ್ಚರು ಸೋಲನ್ನಪ್ಪಿದ್ರೂ ಸಹ ಮತ್ತೊಂದು ಅವಕಾಶ ಸಿಗಲಿದೆ.
ಇನ್ನು ಇಂಗ್ಲೆಂಡ್ ತಂಡಕ್ಕೆ ಇಂತಹ ಅವಕಾಶವಿಲ್ಲ. ಏಕೆಂದ್ರೆ ಆಡಿರುವ ಏಳು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ದಾಖಲಿಸಿ ಉಳಿದ ಪಂದ್ಯದಲ್ಲಿ ಸೋಲು ಅನುಭವಿಸಿರುವ ಇಂಗ್ಲೆಂಡ್ ತಂಡ ಪಾಯಿಂಟ್ ಪಟ್ಟಿಯಲ್ಲಿ 2 ಅಂಕ ಪಡೆದು 10ನೇ ಸ್ಥಾನದಲ್ಲಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದ್ರೂ ಸಹಿತ ಲೀಗ್ ಹಂತದ ಪಾಯಿಂಟ್ ಪಟ್ಟಿಯ ಎಂಟರ ಘಟ್ಟದಲ್ಲಿ ಸ್ಥಾನ ಪಡೆಯುವ ಅವಕಾಶ ತೀರಾ ಕಡಿಮೆ ಇದೆ. ಏಕೆಂದ್ರೆ ಇತರ ತಂಡಗಳ ಫಲಿತಾಂಶಗಳು ಮತ್ತು ರನ್ ರೇಟ್ ನಿರ್ಣಾಯಕವಾಗಿದೆ. ಒಂದು ವೇಳೆ ಎರಡು ಪಂದ್ಯದಲ್ಲಿ ಒಂದು ಸೋತರೂ ಸಹ ಇಂಗ್ಲೆಂಡ್ ತಂಡದ ಚಾಂಪಿಯನ್ಸ್ ಟ್ರೋಫಿಯಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳುವ ಕನಸು ಭಗ್ನವಾಗಲಿದೆ.
ಓದಿ: ಬದ್ಧ ವೈರಿಗಳಿಗೆ ಮತ್ತೆ ಅವಕಾಶ?: ನಡೆಯುತ್ತಾ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಸೆಮಿಫೈನಲ್?